113 ಮೀ. ಸಿಕ್ಸರ್! ನಿಕೋಲಸ್​ ಪೂರನ್ ಹೊಡೆತಕ್ಕೆ​ ರಾಕೆಟ್​ನಂತೆ ಹಾರಿದ ಬಾಲ್​, ಇಲ್ಲಿದೆ ನೋಡಿ ವಿಡಿಯೋ​

ವಿಜಯವಾಣಿ - 2024-08-12T170136.501
Published on

ಓಲ್ಡ್ ಟ್ರಾಫರ್ಡ್: ಇಂದು (ಆ.12) ದಿ ಹಂಡ್ರೆಡ್​ ಟೂರ್ನಿಯಲ್ಲಿ ನಡೆದ ನಾರ್ದರ್ನ್ ಸೂಪರ್‌ಚಾರ್ಜರ್ಸ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್ ನಡುವಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ ತಂಡದ ಬಲಿಷ್ಠ ಬ್ಯಾಟರ್ ನಿಕೋಲಸ್ ಪೂರನ್ ಸಿಡಿಸಿದ ರೋಚಕ 113 ಮೀಟರ್ ಸಿಕ್ಸರ್‌ ಇದೀಗ ನೋಡುಗರ ಹುಬ್ಬೇರಿಸಿದೆ. ಪೂರನ್ ಹೊಡೆದ ರೋಚಕ ಸಿಕ್ಸರ್​, ರಾಕೆಟ್​ನಂತೆ ಹೋಗಿದ್ದು ಮೈದಾನದಲ್ಲಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಐಪಿಎಲ್​ನಲ್ಲಿ ಲಖನೌ ಸೂಪರ್ ಜೈಂಟ್ಸ್​ ತಂಡಕ್ಕೆ ಆಡುವ ನಿಕೋಲಸ್​ ಪೂರನ್ ತಾವೇನು? ತಮ್ಮ ಬ್ಯಾಟಿಂಗ್ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಒಂದಷ್ಟು ಸೀಸನ್​​ಗಳಲ್ಲಿ ತೋರಿಸಿದ್ದಾರೆ. ಕ್ರೀಸ್​ಗೆ ಪೂರನ್ ಬಂದರೆ ಅಲ್ಲಿ ಬೌಂಡರಿ ಮತ್ತು ಸಿಕ್ಸರ್​ಗಳ ಆರ್ಭಟ ಖಚಿತ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿ. ಇದೇ ರೀತಿ ಈ ಬಾರಿ ದಿ ಹಂಡ್ರೆಡ್​ ಟೂರ್ನಿಯಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ಸ್ ಪರ ಬ್ಯಾಟ್ ಮಾಡಿದ ನಿಕೋಲಸ್​, ಕೇವಲ 33 ಎಸೆತಗಳಲ್ಲಿ 66 ರನ್​ ಸಿಡಿಸಿ, ತಮ್ಮ ತಂಡದ ಗೆಲುವಿಗೆ ಕಾರಣರಾದರು.

200 ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಪೂರನ್ 33 ಎಸೆತಗಳಲ್ಲಿ ಅಜೇಯ 66 ರನ್​ಗಳ ಸ್ಫೋಟಕ ಇನ್ನಿಂಗ್ಸ್ ನೀಡಿದರು. ಅಂತಿಮವಾಗಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವನ್ನು 7 ವಿಕೆಟ್​ಗಳ ಅಂತರದಿಂದ ಮಣಿಸಿದ ನಾರ್ದರ್ನ್ ಸೂಪರ್‌ಚಾರ್ಜರ್ಸ್, ಆ್ಯಡಮ್​ ಹೋಸ್ ನಾಯಕತ್ವದಲ್ಲಿ​ ಪಂದ್ಯವನ್ನು ವಶಪಡಿಸಿಕೊಂಡಿತು. ನಿಕೋಲಸ್​ ಪೂರನ್ ಸಿಡಿಸಿದ 113 ಮೀ. ರೋಚಕ ಸಿಕ್ಸರ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೂರನ್​ ಹೊಡೆದ ಸಿಕ್ಸರ್​ ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್​ಗಳನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿರುವುದು ದೃಶ್ಯದಲ್ಲಿ ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net