

ಉಡುಪಿ: ಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ನಿಮಾರ್ಣ ಕಾಮಗಾರಿಗಳು, ಮೇಲ್ಸೇತುವೆ ಕಾಮಗಾರಿ, ಅಂಡರ್ಪಾಸ್ ಹಾಗೂ ಹೆದ್ದಾರಿ ನಿರ್ವಹಣೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದರು.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧಿನ ಪ್ರಕರಣ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಹೆದ್ದಾರಿ ಕಾಮಗಾರಿಗಳಿಗೆ ಅವಶ್ಯವಿರುವ ಭೂಮಿ ಸ್ವಾಧಿನ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಭೂ ಮಾಲೀಕರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಹಣವನ್ನು ವಿಳಂಬವಿಲ್ಲದೇ ಪಾವತಿಸಬೇಕು. ಹೆದ್ದಾರಿ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ನ್ಯಾಯಾಲಯದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥವಾಗುವ ರೀತಿಯಲ್ಲಿ ಕ್ರಮವಹಿಸಬೇಕು ಎಂದರು.
ರಾ.ಹೆ 66 ರ ಸಂತೆಕಟ್ಟೆ ರಸ್ತೆ ಕಾಮಗಾರಿಯ ಉಡುಪಿ ಯಿಂದ ಕುಂದಾಪುರ ಕಡೆ ಹೋಗುವ ರಸ್ತೆಯ ಬದಿಯ ಸೈಡ್ವಾಲ್ ನವೆಂಬರ್ ಒಳಗಾಗಿ ಪೂರ್ಣಗೊಳಿಸಬೇಕು. ಪಕ್ಕದಲ್ಲಿರುವ ಸರ್ವೀಸ್ ರಸ್ತೆಗೆ ಯೋಜನಾ ವರದಿಯನ್ನು ತಯಾರಿಸಿ, ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿ ಮಲ್ಪೆ ಯಿಂದ ಹೆಬ್ರಿ ವರೆಗಿನ ಪರ್ಕಳ ಸಮೀಪ ರಾಷ್ಟ್ರೀಯ ಹೆದ್ದಾರಿ ನಿಮಾರ್ಣ ಕಾಮಗಾರಿಗೆ ನ್ಯಾಯಾಲಯದ ಆದೇಶವು ಸರ್ಕಾರದ ಪರವಾಗಿ ಆಗಿದ್ದು, ಭೂ ಮಾಲೀಕರಿಗೆ ಕೂಡಲೇ ಭೂ ಸ್ವಾಧಿನದ ಪರಿಹಾರದ ಹಣವನ್ನು ನೀಡಬೇಕು. ಕಾಮಗಾರಿಯನ್ನು ಪ್ರಾರಂಭಿಸಬೇಕು. ಪೆರ್ಡೂರಿನ ಅನಂತೇಶ್ವರ ದೇವಸ್ಥಾನ ವ್ಯಾಪ್ತಿಯ 600 ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಸಂಬಂಧ ನ್ಯಾಯಾಲಯವು ತಡೆ ಆಜ್ಞೆ ನೀಡಿದೆ. ಇದನ್ನು ಬಿಟ್ಟು ಬಾಕಿ ಉಳಿದ ಕಾಮಗಾರಿಯನ್ನು ಕೈಗೊಳ್ಳಬೇಕು. ದೇವಸ್ಥಾನ ಹಾಗೂ ಕಲ್ಯಾಣಿಯ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದೆಂಬುದು ಭಕ್ತರ ಬೇಡಿಕೆಯಿದೆ. ಇದನ್ನು ಮನಗಂಡು ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದರು.
ಕರಾವಳಿ ಜಂಕ್ಷನ್ನಿಂದ ಮಲ್ಪೆ ಜಂಕ್ಷನ್ ವರೆಗಿನ ರಾಷ್ಟ್ರೀಯ ಹೆದ್ದಾರಿ ನಿಮಾರ್ಣಕ್ಕೆ ಅಗತ್ಯವಿರುವ ಭೂ ಸ್ವಾಧಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದರೊಂದಿಗೆ ಭೂ ಮಾಲೀಕರಿಗೆ ಪರಿಹಾರದ ಹಣವನ್ನು ನ. 10 ರ ಒಳಗೆ ನೀಡಬೇಕು. ಈಗಾಗಲೇ ಜೊತೆಗೆ ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು ಎಂದರು.
ರಾ.ಹೆ 66 ರ ಹೆಜಮಾಡಿ ಹಾಗೂ ಸಾಸ್ತಾನದ ಟೋಲ್ ಗೇಟ್ ಬಳಿ ರಾತ್ರಿ ವೇಳೆಯಲ್ಲಿ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಕ್ಯಾಂಟೀನ್ ಪ್ರಾರಂಭಿಸುವ ಕುರಿತು ಕೂಡಲೇ ಟೆಂಡರ್ ಕರೆಯಬೇಕು. ಟೋಲ್ನ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳಿಯ ಜನರ ವಾಹನಗಳಿಗೆ ರಿಯಾಯಿತಿ ನೀಡಬೇಕು ಎಂದರು.
ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ ಮುಗಿದ ಬಳಿಕ ಕಟಪಾಡಿ ಮತ್ತು ಅಂಬಲಪಾಡಿಯಲ್ಲಿ ಓವರ್ ಪಾಸ್ ನಿಮಾರ್ಣ ಕಾಮಗಾರಿ ಕೈಗೊಳ್ಳಬೇಕು. ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕು. ಸವಣೂರು-&ಬಿರ್ಕನಕಟ್ಟೆ ರಸ್ತೆ ಕಾಮಗಾರಿಯು ಮಳೆಯಿಂದಾಗಿ ನಿಧಾನವಾಗಿದ್ದು, ಮಳೆಯ ಕಡಿಮೆಯಾಗಿರುವುದರಿಂದ ಕಾಮಗಾರಿ ಪ್ರಗತಿಯನ್ನು ತ್ವರಿತಗೊಳಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ವೀಸ್ ರಸ್ತೆ, ತಾತ್ಕಾಲಿಕ ಬಸ್ ನಿಲ್ದಾಣ ಸೇರಿದಂತೆ ಅಗತ್ಯವಿರುವ ಪೂರಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಡಿಎಫ್ಓ ಗಣಪತಿ, ಸಹಾಯಕ ಕಮೀಷನರ್ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಮತ್ತಿತರರು ಉಪಸ್ಥಿತರಿದ್ದರು.