

ವಿಶಾಖಪಟ್ಟಣಂ: ಇಲ್ಲಿನ ಆರ್.ಆರ್. ವೆಂಕಟಾಪುರಂನಲ್ಲಿರುವ ದಕ್ಷಿಣ ಕೊರಿಯಾದ ಮೂಲದ ಎಲ್ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷಾನಿಲ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ರಚಿಸಿದ್ದ ನ್ಯಾಯಾಂಗ ತನಿಖಾ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ.
ಆಂಧ್ರಪ್ರದೇಶ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ. ಶೇಷಶಯನ ರೆಡ್ಡಿ ನೇತೃತ್ವದ ಸಮಿತಿ ರಚನೆಯಾದ ಮೂರು ವಾರಗಳ ಬಳಿಕ ವರದಿ ಸಲ್ಲಿಸಿದ್ದು, ವಿಷಾನಿಲ ದುರಂತಕ್ಕೆ ಎಲ್.ಜಿ. ಪಾಲಿಮರ್ಸ್ ಆಡಳಿತ ಮಂಡಳಿಯಿಂದಾದ ಐದು ಪ್ರಮುಖ ಲೋಪಗಳನ್ನು ಪಟ್ಟಿ ಮಾಡಿದೆ.
ಇದನ್ನೂ ಓದಿ; ವಿಷಾನಿಲ ದುರಂತ: ಎಫ್ಐಆರ್ನಲ್ಲಿ ಯಾರ ಹೆಸರೂ ಇಲ್ಲ...!
ಸ್ಟೈರಿನ್ ಅನಿಲ ಸಂಗ್ರಹಿಸಿದ್ದ ಟ್ಯಾಂಕ್ನಲ್ಲಿ ಅನಿಲದ ಪ್ರತಿರೋಧಕ ಶಕ್ತಿಯನ್ನು ನಿಯಂತ್ರಿಸುವ ರಾಸಾಯನಿಕ (4-ಟೆರ್ಟ್ ಬ್ಯುಟಿಲ್ಕ್ಯಾಟ್ಕೋಲ್ ) ಸೂಕ್ತ ಪ್ರಮಾಣದಲ್ಲಿ ಇರಲಿಲ್ಲ. ಕರಗಿದ ಆಮ್ಲಜನಕ ಪ್ರಮಾಣವನ್ನು ಗುರುತಿಸುವ ನಿಗಾ ವ್ಯವಸ್ಥೆ ಹೊಂದಿರಲಿಲ್ಲ, ಟ್ಯಾಂಕ್ನ ಮೇಲ್ಪದರದಲ್ಲಿರುವ ತಾಪಮಾನವನ್ನು ಅಳೆಯುವ ವ್ಯವಸ್ಥೆ ಕೂಡ ಇರಲಿಲ್ಲ. ಟ್ಯಾಂಕ್ಅನ್ನು ಶೀತಲವಾಗಿರಿಸುವ ವ್ಯವಸ್ಥೆಯನ್ನು 24 ತಾಸುಗಳಿಂದ ಸರಿಯಾಗಿ ನೋಡಿಕೊಂಡಿರಲಿಲ್ಲ. ಒಟ್ಟಾರೆ ಮಾನವ ಲೋಪ ಹಾಗೂ ನಿರ್ಲಕ್ಷ್ಯದಿಂದಾಗಿಯೇ ಈ ವಿಷಾನಿಲ ದುರಂತ ಸಂಭವಿಸಿದೆ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ, ವಿಷಾನಿಲ ದುರಂತದಿಂದ ಸಂಭವಿಸಿರುವ ಹಾನಿಗೆ 50 ಕೋಟಿ ರೂ.ಗಳನ್ನು ಠೇವಣಿಯಾಗಿಬೇಕೆಂಬ ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ಮೇ 8ರಂದು ಎಲ್.ಜಿ. ಪಾಲಿಮರ್ಸ್ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ದುರಂತದಲ್ಲಿ 11 ಜನರು ಮೃತಪಟ್ಟು, ಸಾವಿರಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಾಜು 2,000 ಮೆಟ್ರಿಕ್ ಟನ್ ಅನಿಲ ಸೋರಿಕೆಯಾಗಿತ್ತು. ಇದಲ್ಲದೇ, ಸುತ್ತಲಿನ 5 ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡಲಾಗಿತ್ತು.