

ಕಾರವಾರ:ಶರಾವತಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸುವ ಸಂಬಂಧ ಹೊನ್ನಾವರದ ಬಿಜೆಪಿ ಮುಖಂಡರೊಬ್ಬರು ಚೆನ್ನೈನ ಹಸಿರು ನ್ಯಾಯ ಮಂಡಳಿಯ ಮೊರೆ ಹೋಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯನ್ನು ಯಥಾ ಸ್ಥಿತಿ ಕಾಪಾಡುವಂತೆ ಎನ್‌ಜಿಟಿ ಆದೇಶ ಮಾಡಿದೆ. ಅಕ್ಟೋಬರ್ 4 ರಂದು ನ್ಯಾಯ ಮಂಡಳಿಯಲ್ಲಿ ವಿಚಾರಣೆ ಬಾಕಿ ಇದೆ. ನ್ಯಾಯ ಮಂಡಳಿಯಿಂದ ಅಂತಿಮ ಆದೇಶ ಬರುವವರೆಗೆ ನಾವು ಮರಳು ಗಣಿಗಾರಿಕೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಮಂಕಾಳ ವೈದ್ಯ ತಿಳಿಸಿದರು.
ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ರಾಜ್ಯದ 13 ಬಂದರುಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರತಿ ಬಂದರಿಗೆ 50 ಕೋಟಿ ರೂ.ಯೋಜನೆ ರೂಪಿಸಿದ್ದೇವೆ. ವಾರ್ಫ್ ವಿಸ್ತರಣೆ, ಶೌಚಗೃಹ, ವಿಶ್ರಾಂತಿ ಕೊಠಡಿ, ಬಲೆ ಇಡಲು, ಹೊಲಿಯಲು ಶೆಡ್, ಕ್ಯಾಂಟೀನ್, ಸಿಸಿ ಕ್ಯಾಮರಾ ಹೀಗೆ ಎಲ್ಲ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಬಂದರುಗಳಲ್ಲಿ ವರ್ಷ ಬಿಟ್ಟು ವರ್ಷ ಹೂಳೆತ್ತಲು ಯೋಜಿಸಿದ್ದೇವೆ. ಪ್ರತಿ ವರ್ಷ ಅದಕ್ಕೆ ಸುಮಾರು 25 ಕೋಟಿ ರೂ.ಗಳನ್ನು ಮೀಸಲಿಡಲಾಗುತ್ತಿದೆ ಎಂದರು. ಇಡೀ ರಾಜ್ಯದ ಕರಾವಳಿ ತೀರದಲ್ಲಿ ಸಮುದ್ರ ಕೊರೆತ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ 1017 ಕೋಟಿ ರೂ. 2017 ರಲ್ಲಿ ಮಂಜೂರಾಗಿತ್ತು. ಸಿಆರ್‌ಜಡ್ ಅನುಮತಿ ಇಲ್ಲದೇ ಹಣ ಖರ್ಚಾಗಿಲ್ಲ. ಕೆಲವಷ್ಟು ಹಣ ವಾಪಸಾಗಿದೆ. ಇನ್ನಷ್ಟು ಟೆಂಡರಾಗದೇ ಬಿದ್ದುಕೊಂಡಿದೆ. ನಾವು ಈಗ ಸಿಆರ್‌ಜಡ್ ಅನುಮತಿಯನ್ನು ಇಡೀ ರಾಜ್ಯದ ಕಡಲ ತೀರಕ್ಕೆ ಒಟ್ಟಿಗೇ ಪಡೆದುಕೊಳ್ಳುತ್ತಿದ್ದೇವೆ. ನಂತರ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಹಾರವಾಡದಲ್ಲಿ ಸಮುದ್ರ ಕೊರೆತ ತಡೆಗೆ ರಾಜ್ಯ ಸರ್ಕಾರದಿಂದ 20 ಕೋಟಿ ರೂ. ಮಂಜೂರಾಗಿದೆ ಎಂದು ಅವರು ತಿಳಿಸಿದರು.
850 ಕೋಟಿ ರೂ. ಬಿಡುಗಡೆಯಾಗಿಲ್ಲ:
ನಬಾರ್ಡ್ನಿಂದ ಕೋಸ್ಟಲ್ ಸರ್ಕ್ಯೂಟ್ ಯೋಜನೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅನುದಾನ ನೀಡುವುದಾಗಿ ಕೇಂದ್ರದಿAದ ತಿಳಿಸಲಾಗಿತ್ತು. ಅರಣ್ಯ, ಮೀನುಗಾರಿಕೆ, ನಗರ ಸ್ಥಳೀಯ ಸಂಸ್ಥೆಗಳು ಸೇರಿ 8 ಇಲಾಖೆಗಳಿಂದ ರಾಜ್ಯ ಸರ್ಕಾರ ವಿಸ್ತçತ ಯೋಜನಾ ವರದಿ ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಇದುವರೆಗೂ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ. ಆದರೆ, ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ನೋಡಿದ್ದೇನೆ. ಕೇಂದ್ರದವರು ಎಲ್ಲಾದರೂ ಬಿಲ್ ಮಾಡಿ ಹಣ ತಿಂದು ಹಾಕಿದ್ದಾರೋ ಗೊತ್ತಿಲ್ಲ. ನಾವು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ಮಾಹಿತಿ ಪಡೆಯಬೇಕು ಎಂದು ಸಚಿವ ಮಂಕಾಳ ವೈದ್ಯ ವ್ಯಂಗ್ಯವಾಡಿದರು.