

ಪಡುಬಿದ್ರಿ: ಶತಮಾನಗಳ ಹಿಂದೆ ನಿಂತು ಹೋಗಿದ್ದ ಎರ್ಮಾಳು ಬೀಡಿನ ಕಂಬಳ ಮುಂದಿನ ಋತುವಿನಲ್ಲಿ ತೆಂಕ- ಬಡಾ ಜೋಡುಕರೆ ಕಂಬಳವಾಗಿ ಪುನರಾಂರಭವಾಗುವ ನಿರೀಕ್ಷೆ ಮೂಡಿದೆ.
ಎರ್ಮಾಳು ಬಡಕೊಟ್ಟು ನಂದಿಕೇಶ್ವರ ಸನ್ನಿಧಿಯಲ್ಲಿ ಬೀಡಿನ ಪ್ರಮುಖರು, ಮನೆತನದವರು ಹಾಗೂ ಊರವರ ಸಮ್ಮುಖದಲ್ಲಿ ಬುಧವಾರ ನಡೆದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಬಳ ನಿಂತು ಹೋಗಿರುವ ಸಹಿತ ಹಲವು ದೋಷಗಳಿಗೆ ಪ್ರಾಯಶ್ಚಿತ್ತ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಡಕೊಟ್ಟು ಬಾಕ್ಯಾರಿನಲ್ಲಿ ಶತಮಾನಗಳ ಹಿಂದೆ ಕಂಬಳ ನಡೆದಿತ್ತು. ಬೀಡಿನ ಕುಟುಂಬ ಎರ್ಮಾಳಿಗೆ ಸ್ಥಳಾಂತರ ಬಳಿಕ ಅಲ್ಲಿಯೇ ಕಂಬಳವೂ ನಡೆದಿತ್ತು. ಅದು ನಿಂತು ಹಲವು ವರ್ಷಗಳೇ ಕಳೆದಿರಬಹುದು ಎಂದು ಊರಿನ ಹಿರಿಯರು ನೆನಪಿಸುತ್ತಾರೆ. ಎರ್ಮಾಳು ರೋಹಿತ್ ಹೆಗ್ಡೆ, ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ ಸಹಿತ ಮೂಡುಬೆಟ್ಟು ಬರ್ಪಾಣಿ ಸಂತೋಷ್ ಜೆ.ಶೆಟ್ಟಿ ಮಾಲಕತ್ವದ ಓಟದ ಕೋಣಗಳನ್ನು ಹೊಂದಿದ್ದಾರೆ. ತೆಂಕ ಬಡಾ ಜೋಡುಕರೆ ಹೆಸರಿನಲ್ಲಿ ಎರ್ಮಾಳು ಕಂಬಳ ಮತ್ತೆ ಆರಂಭಿಸಲು ಚಿಂತಿಸಿರುವುದು ಕಂಬಳಾಭಿಮಾನಿಗಳಿಗೆ ಹರುಷ ತಂದಿದೆ. ಕಂಬಳ ಕರೆ ನಿರ್ಮಾಣಕ್ಕೆ ಶ್ರಾವಣ ಮಾಸದಲ್ಲಿ ಮೂಹೂರ್ತ ನಡೆಸುವ ಇರಾದೆಯನ್ನು ಸಂಘಟಕರು ಹೊಂದಿರುವುದಾಗಿ ತಿಳಿದು ಬಂದಿದೆ.