ಫ್ರೀಜ್ ಆಗಿದ್ದ ಖಾತೆಗೆ ₹1.32 ಕೋಟಿ ಕನ್ನ

Cybercriminal
Published on

ಬೆಂಗಳೂರು: ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಇ-ಮೇಲ್ ಮತ್ತು ಕೋರ್ಟ್ ಹೆಸರಿನಲ್ಲಿ ನಕಲಿ ಆದೇಶಗಳನ್ನು ಸೃಷ್ಟಿಸಿ ಪೊಲೀಸರು ಜಪ್ತಿ ಮಾಡಿದ್ದ ಬ್ಯಾಂಕ್ ಖಾತೆಯಿಂದ 1.32 ಕೋಟಿ ರೂ. ದೋಚಿದ್ದ ಮೂವರನ್ನು ನಗರ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಸಾಗರ್ ಲಾಕುರ್, ದೆಹಲಿ ಮೂಲದ ಅಭಿಮನ್ಯು ಕುಮಾರ್ ಪಾಂಡೆ ಮತ್ತು ನೀರಜ್ ಸಿಂಗ್ ಬಂಧಿತರು. ಹಲಸೂರಿನ ಐಸಿಐಸಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ, 63 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖ ಆರೋಪಿ ಸಾಗರ್, ರಾಜಸ್ತಾನದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದ. ಹೀಗಾಗಿ ಅಪರಾಧ ಪ್ರಕರಣಗಳಲ್ಲಿ ಒಳಗಾಗಿರುವ ಬ್ಯಾಂಕ್ ಖಾತೆ ಜಪ್ತಿ ಆಗಿರುವ ಹಣವನ್ನು ಹೇಗೆ ಬಿಡಿಸಿಕೊಳ್ಳಬೇಕೆಂಬುದರ ಬಗ್ಗೆ ತಿಳಿದುಕೊಂಡಿದ್ದ. ಈತ ಬೆಟ್ಟಿಂಗ್ ಆ್ಯಪ್‌ನಲ್ಲಿ ತೊಡಗಿಸಿಕೊಂಡಿದ್ದರಿಂದ ಅಲಹಾಬಾದ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆರು ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದ ಸಾಗರ್, ಬೆಂಗಳೂರಿನ ಹಲಸೂರಿನ ಐಸಿಐಸಿಐ ಬ್ಯಾಂಕ್‌ನಲ್ಲಿ ಜಪ್ತಿಯಾಗಿರುವ 1.32 ಕೋಟಿ ರೂ. ಬಗ್ಗೆ ತಿಳಿದುಕೊಂಡಿದ್ದ. ದೆಹಲಿ ಮೂಲದ ಅಭಿಮನ್ಯು ಮತ್ತು ನೀರಜ್ ಸಿಂಗ್‌ಗೆ ಹಣದ ಆಮಿಷವೊಡ್ಡಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸಿದ್ದ.

ಪೂರ್ವಾಸಂಚಿನಂತೆ ಬ್ಯಾಂಕ್‌ನಲ್ಲಿ ಹಣ ಎಗರಿಸಲು ರೂಪುರೇಷೆ ಸಿದ್ಧಪಡಿಸಿಕೊಂಡ ಸಾಗರ್, ಸರ್ಕಾರಿ ಅಧಿಕಾರಿ ಹೆಸರಿನಲ್ಲಿ ಇಮೇಲ್ ಸೃಷ್ಟಿಸಿಕೊಂಡು ಅದರ ಮೂಲಕ ಐಸಿಐಸಿಐ ಬ್ಯಾಂಕ್ ಇಮೇಲ್ಗೆ ಕೋರ್ಟ್ ಹೆಸರಿನಲ್ಲಿ ನಕಲಿ ಆದೇಶ ಪ್ರತಿಯನ್ನು ಕಳುಹಿಸಿದ್ದ. ತನಗೆ ಬೇಕಾದ ಬ್ಯಾಂಕ್ ಖಾತೆಗೆ ಜಪ್ತಿಯಾಗಿರುವ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದ. 2024ರ ಸೆ.19ರಿಂದ 2025ರ ೆ.12 ರವರೆಗೂ 18 ಬಾರಿ ನಕಲಿ ಕೋರ್ಟ್ ಆದೇಶ ಪ್ರತಿಗಳನ್ನು ಕಳುಹಿಸಿದ್ದ. ಜತೆಗೆ ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಬ್ಯಾಂಕ್‌ಗೆ ಕರೆ ಮಾಡಿ ಜಪ್ತಿ ಆಗಿರುವ ಹಣವನ್ನು ಅಭಿಮನ್ಯು ಮತ್ತು ನೀರಜ್ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸುತ್ತಿದ್ದ.

ಪ್ರತಿ ಆದೇಶದಲ್ಲಿರುವ ಮೊಬೈಲ್ ನಂಬರ್ ಮತ್ತು ಕರೆ ಮಾಡಿದ ವ್ಯಕ್ತಿಯ ಮೊಬೈಲ್ ನಂಬರ್ ಒಂದೇ ಆಗಿರುವ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗಳು ನೈಜ ಇರಬೇಕೆಂದು ಬರೋಬ್ಬರಿ 1.32 ಕೋಟಿ ರೂ. ಕಳುಹಿಸಿದ್ದರು. ಪದೇಪದೆ ಕರೆ ಮಾಡಿ ಹೆಚ್ಚಿನ ಹಣ ವರ್ಗಾಯಿಸಿಕೊಂಡ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗೆ ಅನುಮಾನ ಬಂದು ನಗರ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಹಜರೇಶ್ ನೇತೃತ್ವದ ತಂಡ ತಾಂತ್ರಿಕ ಸಾಕ್ಷಾೃಧಾರ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೋಜು-ಮಸ್ತಿ, ಮದುವೆ ಸಹಾಯ

ಆರೋಪಿ ಸಾಗರ್, ಸೈಬರ್ ಕ್ರೈಂ ಉದ್ದೇಶಕ್ಕೆ ದೆಹಲಿ ನಮ್ಮ ಮೆಟ್ರೋದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಭಿಮನ್ಯುಗೆ ಹಣದ ಆಮಿಷವೊಡ್ಡಿ ಬ್ಯಾಂಕ್ ಖಾತೆ ತೆರೆಸಿದ್ದ. ಆ ಖಾತೆಗೆ ಬ್ಯಾಂಕ್ ಅಧಿಕಾರಿ ಹಣ ವರ್ಗಾವಣೆ ಮಾಡಿದ ಮೇಲೆ ಡ್ರಾ ಮಾಡಿಸಿಕೊಂಡು ತನಗೆ ಬೇಕಾದ ಖಾತೆಗೆ ಜಮೆ ಮಾಡಿಸಿಕೊಳ್ಳುತ್ತಿದ್ದ. ಇದಕ್ಕಾಗಿ ಅಭಿಮನ್ಯುಗೆ 8 ಲಕ್ಷ ರೂ. ಕಮಿಷನ್ ಕೊಟ್ಟಿದ್ದ. ಇದೇ ರೀತಿ ಮತ್ತೊಬ್ಬ ಆರೋಪಿ ನೀರಜ್, ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿದ್ದ. ಈತ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಿದ್ದ. ಜತೆಗೆ ಈತನ ಹೆಸರಿನಲ್ಲಿ ಸಹ ಬ್ಯಾಂಕ್ ಖಾತೆ ತೆರೆದಿದ್ದ. ಈತನ ಮದುವೆಗೆ 3 ಲಕ್ಷ ರೂ. ಸಹಾಯ ಮಾಡಿದ್ದ ಸಾಗರ್, ಉಳಿದ ಹಣವನ್ನು ಕ್ಯಾಸಿನೊ, ಪಬ್ಗಳಲ್ಲಿ ಮೋಜು ಮಸ್ತಿ ಮಾಡಿ 38 ಲಕ್ಷ ರೂ. ದುಂದುವೆಚ್ಚ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಧಿಕಾರಿ ಸೋಗಿನಲ್ಲಿ ಇ-ಮೇಲ್ ಪಡೆದ

ಸರ್ಕಾರಿ ಅಧಿಕಾರಿ ಹೆಸರಿನಲ್ಲಿ ಸೀಲು, ಸಹಿ ಸೃಷ್ಟಿಸಿಕೊಂಡು ಸರ್ಕಾರದ ಇ-ಮೇಲ್ ಐಡಿ ಬೇಕೆಂದು ಸರ್ಕಾರ ಅಧೀನದಲ್ಲಿ ಬರುವ ಇ-ಗವರ್ನೆಸ್‌ಗೆ (ಕೆ-ಸ್ವಾನ್ ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್) ಇ-ಮೇಲ್‌ನಲ್ಲಿ ಕಿಂಗ್‌ಪಿನ್ ಸಾಗರ್ ಮನವಿ ಸಲ್ಲಿಸಿದ್ದ. ಸರ್ಕಾರಿ ಅಧಿಕಾರಿ ಇರಬೇಕೆಂದು ಇಮೇಲ್ ಐಡಿ ಸೃಷ್ಟಿಸಿಕೊಟ್ಟಿದ್ದರು. ಈ ಮೂಲಕ ಬ್ಯಾಂಕ್‌ನ ನೋಡಲ್ ಅಧಿಕಾರಿಗೆ ಇಮೇಲ್ ಕಳುಹಿಸಿ ಜಪ್ತಿಯಾಗಿರುವ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net