ವಿಜಯವಾಣಿ ಸುದ್ದಿಜಾಲ ಕೋಲಾರ
ಮಕ್ಕಳಿಗೆ ಮಾರಕವಾದ ದಡಾರ ಹಾಗೂ ರುಬೆಲ್ಲಾ ಕಾಯಿಲೆಗಳನ್ನು ೨೦೨೩ರ ಅಂತ್ಯದೊಳಗೆ ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿ ಸಾಧನೆಗೆ ಇಂಧ್ರ ಧನುಷ್-೫.೦ ೩ನೇ ಸುತ್ತಿನ ಅಭಿಯಾನ ಯಶಸ್ವಿಗೊಳಿಸುವಂತೆ ತಹಸೀಲ್ದಾರ್ ಹರ್ಷವರ್ಧನ್ ಅಧಿಕಾರಿಗಳಿಗೆ ಕರೆ ನೀಡಿದರು.
ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಿಷನ್ ಇಂದ್ರಧನುಷ್-೫.೦ ಮೂರನೇ ಸುತ್ತಿನ ಅಭಿಯಾನದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಜನತೆಗೆ ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಲಸಿಕಾ ಅಭಿಯಾನದಲ್ಲಿ ಬಿಟ್ಟು ಹೋಗಿರುವ ಮಕ್ಕಳ ಪಟ್ಟಿ ಸಿದ್ದಪಡಿಸಿದ್ದು, ಅದರಂತೆ ಮನೆ ಮನೆಗೂ ಹೋಗಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.೧೦೦ ಸಾಧನೆಯೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿ, ದೇಶಕ್ಕೆ ಆರೋಗ್ಯವಂತ ಭವಿಷ್ಯದ ಪ್ರಜೆಗಳನ್ನು ಕೊಡುಗೆಯಾಗಿ ನೀಡಿ ಎಂದರು.
ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮಕ್ಕಳು, ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಿವೆ, ಲಸಿಕೀಕರಣದಲ್ಲಿ ಯಾವುದೇ ಮಗು ತಪ್ಪಿ ಹೋಗದಂತೆ ಕ್ರಮವಹಿಸಲು ನಿರ್ದೇಶನವಿದ್ದು, ಆರೋಗ್ಯ ಇಲಾಖೆ ಜತೆಗೆ ಇತರೆ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಿ, ಅಭಿಯಾನ ಯಶಸ್ವಿಗೊಳಿಸಲು ಸಹಕಾರ ನೀಡಿ ಎಂದು ಸೂಚಿಸಿದರು.
ಅ.೯ರಿಂದ ೧೪ರವರೆಗೆ
೮೩೨ಮಕ್ಕಳಿಗೆ ಲಸಿಕೆ
ಚಾಲನಾ ಸಮಿತಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೋಲಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಲಸಿಕೆ ಹಾಕಿಸಿಕೊಳ್ಳದೇ ಬಿಟ್ಟುಹೋದ ಮಕ್ಕಳನ್ನು ಹುಡುಕಿ ೫ ವರ್ಷದೊಳಗಿನ ಪ್ರತಿ ಮಗುವಿಗೂ ಲಸಿಕೆ ಹಾಕಿಸಿ ದಡಾರ,ರೊಬೆಲ್ಲಾ ರೋಗಗಳಿಂದ ಮುಕ್ತಗೊಳಿಸುವುದೇ ಈ ಅಭಿಯಾನದ ಉದ್ದೇಶ ಎಂದರು.
ತಾಲ್ಲೂಕಿನಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಡಿಯಲ್ಲಿ ಆಶಾ ಕಾರ್ಯಕರ್ತರ ನೆರವಿನಿಂದ ಸರ್ವೇ ನಡೆಸಿ ಲಸಿಕೆ ಹಾಕಿಸಿಕೊಳ್ಳದ ಒಟ್ಟು ೮೩೨ ಮಕ್ಕಳನ್ನು ಹಾಗೂ ೧೭೨ ಗರ್ಭಿಣಿಯರನ್ನು ಗುರುತಿಸಲಾಗಿದ್ದು, ಈ ಎಲ್ಲರಿಗೂ ಲಸಿಕೆ ಹಾಕುವ ಮೂಲಕ ಗುರಿ ಸಾಧನೆಗೆ ಕ್ರಮವಹಿಸಿರುವುದಾಗಿ ತಿಳಿಸಿದರು.
ಇಂಧ್ರ ಧನುಷ್ ೫.೦ ಮೂರನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಲಸಿಕೆ ಹಾಕಲು ನಗರ ಪ್ರದೇಶದ ೪ ಹಾಗೂ ಗ್ರಾಮೀಣ ಪ್ರದೇಶದ ೧೪ ಪ್ರಾಥಮಿಕ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ನೆರೆ ರಾಜ್ಯಗಳಿಂದ ಇಲ್ಲಿ ಕೂಲಿ, ಕಟ್ಟಡ ನಿರ್ಮಾಣ ಕೆಲಸಗಳಿಗೆ ಬರುವ ಕುಟುಂಬಗಳಲ್ಲಿನ ಮಕ್ಕಳು, ಅಲೆಮಾರಿ ಸಮುದಾಯದ ಕುಟುಂಬಗಳ ಮಕ್ಕಳು ಸೇರಿದಂತೆ ಯಾರೇ ಲಸಿಕೀಕರಣದಿಂದ ತಪ್ಪಿ ಹೋಗಿದ್ದಲ್ಲಿ ಅವರನ್ನು ಹುಡುಕಿ ಶೇ.೧೦೦ ಲಸಿಕೀಕರಣದ ಸಾಧನೆ ಮಾಡೋಣ ಎಂದರು.
ಸಭೆಯಲ್ಲಿ ತಾಪಂ ಯೋಜನಾಧಿಕಾರಿ ಎನ್.ರಮೇಶ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಇಸಿಒ ಶ್ರೀನಿವಾಸ್, ಸಿಡಿಪಿಒ ಕಚೇರಿಯ ಪವಿತ್ರ,ಹಿರಿಯ ಆರೋಗ್ಯ ನಿರೀಕ್ಷಕ ಸತ್ಯನಾರಾಯಣಗೌಡ, ಕ್ಷೇತ್ರ ಪ್ರೋಗ್ರಾಂ ಕೋ-ಆರ್ಡಿನೇಟರ್ ಮಂಜುನಾಥ್ ಇದ್ದರು.
ಚಿತ್ರ ೦೭ ಕೆ.ಎಲ್.ಆರ್. ೦೪ : ಕೋಲಾರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಮಿಷನ್ ಇಂದ್ರಧನುಷ್-೫.೦ ಮೂರನೇ ಸುತ್ತಿನ ಅಭಿಯಾನದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಹರ್ಷವರ್ಧನ್ ಜನತೆಗೆ ಲಸೀಕರಣದ ಕುರಿತು ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆ ಮಾಡಿದರು. ಟಿ.ಹೆಚ್.ಓ ಡಾ.ಎ.ವಿ.ನಾರಾಯಣಸ್ವಾಮಿ, ತಾ.ಪಂ.ಯೋಜನಾಧಿಕಾರಿ ಎನ್.ರಮೇಶ್ ಇದ್ದರು.