

ಕೋಲಾರ : ಕೆಜಿಎಫ್‌ನಲ್ಲಿ ವ್ಯರ್ಥವಾಗಿರುವ ೧ಸಾವಿರ ಹೆಕ್ಟೇರ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಿಸಲು ಪ್ರಸ್ತಾವ ಕಳುಹಿಸಲಾಗುವುದು. ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆ ಹಾಗೂ ವೈಟ್ ಫೀಲ್ಡ್ನಲ್ಲಿನ ಸ್ಯಾಟಿಲೈಟ್ ಟೌನ್‌ಷಿಪ್ ಬಳಿಕದ ಸಹಸ್ರಾರು ಕೋಟಿ ರೂ.ವೆಚ್ಚದ ಯೋಜನೆ ಇದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಜಿಲ್ಲಾ ಸಂಘ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಾದರಿ ಜಿಲ್ಲೆ ಮಾಡುವ ಉದ್ದಶವಿದೆ ಎಂದರು.
ಜಿಲ್ಲೆಯು ಈ ಹಿಂದೆ ಬರಪಿಡೀತ ಹಣೆಪಟ್ಟಿ ಪಡೆದಿತ್ತು. ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೆಸಿ ವ್ಯಾಲಿ ಯೋಜನೆ ಜಾರಿಗೊಳಿಸಿ ಕೆರೆಗಳು ತುಂಬಿಸುವ ಕೆಲಸ ಮಾಡಿದರು. ಇದರಿಂದ ಅಂತರ್ಜಲ ವೃದ್ಧಿಯಾಗಿ ಭಾರಿ ಬದಲಾವಣೆ ಕಾಣುವಂತಾಯಿತು ಎಂದರು.
೩ ತಿಂಗಳಲ್ಲಿ ಯರಗೋಳ್ ಚಾಲನೆ: ಮುಂದಿನ ಡಿಸೆಂಬರ್ ಒಳಗೆ ಯರಗೋಳ್ ಜಲಾಶಯದಿಂದ ಕುಡಿಯುವ ನೀರನ್ನು ಬಂಗಾರಪೇಟೆ, ಮಾಲೂರು, ಕೋಲಾರ ಹಾಗೂ ೪೫ ಹಳ್ಳಿಗೆಗಳಿಗೆ ಪೂರೈಕೆ ಮಾಡಲಾಗುವುದು. ಶೇ. ೮೭ರಷ್ಟು ಕಾಮಗಾರಿ ಮುಗಿದಿದ್ದು ಕೋಲಾರದಲ್ಲಿ ೪ರಲ್ಲಿ ೨ ಟ್ಯಾಂಕ್ ಸಿದ್ಧವಾಗಿವೆ. ಶುದ್ಧೀಕರಣ ಘಟಕದಲ್ಲಿ ಮೂರು ಮೋಟಾರ್ ಅಳವಡಿಸಲಾಗಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ವಿಳಂಬವಾಗಲು ಹಿಂದಿನ ಬಿಜೆಪಿ ಸರ್ಕಾರ ಕಾರಣ. ಈ ಯೋಜನೆಯಡಿ ೧೩೮ ಕೆರೆಗಳನ್ನು ತುಂಬಿಸಲು ಟೆಂಡರ್ ಆಗಿದೆ. ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಲಾಗುವುದು ಎಂದರು.
ಕೋಲಾರಮ್ಮ, ಅಮ್ಮೇರಹಳ್ಳಿ, ಮಡೇರಹಳ್ಳಿ ಕೆರೆಗಳಿಗೆ ಕೆಸಿವ್ಯಾಲಿ ನೀರು ಹರಿದಿದ್ದು, ಈ ಕೆರೆಗಳಲ್ಲಿನ ಕೊಳವೆ ಬಾವಿಗಳಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಪರಿಶೀಲಸಲಾಗುವುದು. ಈಗಾಗಲೇ ಇನ್ಫೊಸಿಸ್ ಕಂಪನಿಯಿಂದ ೨೦ ಕೋಟಿ ಸಿಎಸ್‌ಆರ್ ನಿಧಿ ಲಭಿಸಿದ್ದು, ಕೋಲಾರಮ್ಮ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಹಿಂದೆ ಕೆ.ಸಿ.ವ್ಯಾಲಿ ಯೋಜನೆಯಡಿ ಈ ಕೆರೆ ಅಭಿವೃದ್ಧಿಯಲ್ಲಿ ಕಳಪೆ ಕಾಮಗಾರಿ ಆಗಿದ್ದರೆ ತನಿಖೆ ನಡೆಸಲಾಗುವುದು ಎಂದರು
ಕೋಲಾರ ನಗರದಲ್ಲಿ ೧೧ ಕೋಟಿ ತೆರಿಗೆ ಸಂಗ್ರಹ ಬಾಕಿ ಇದ್ದು, ರಾಜಕೀಯ ಒತ್ತಡಕ್ಕೆ ಮಣಿಯದೆ ಆಯುಕ್ತರು ತೆರಿಗೆ ವಸೂಲಿ ಮಾಡಬೇಕು. ಇಲ್ಲದಿದ್ದರೆ ಅವರ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಕೆರೆ, ಉದ್ಯಾನ, ಮಳೆ ನೀರು ಕಾಲುವೆ ಅಭಿವೃದ್ಧಿಗೆಗೆ ೭೪ ಕೋಟಿ ರೂ.ಅನುದಾನ ನೀಡಲಾಗುತ್ತಿದೆ. ಇದರಲ್ಲಿ ನಗರಕ್ಕೆ ೨೪ ಕೋಟಿ ರೂ. ಸಿಗಲಿದೆ. ಇನ್ನೆರಡು ತಿಂಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ರಿಂಗ್ ರಸ್ತೆಗೆ ಡಿಪಿಆರ್ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋಲಾರ, ಮಾಲೂರಿನಲ್ಲಿ ತಲಾ ೫೦೦ ಎಕರೆಯಲ್ಲಿ ಸರ್ಕಾರದಿಂದಲೇ ನಿವೇಶನಗಳ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಲಾಭದ ಉದ್ದೇಶ ಅಲ್ಲ. ಈಗಾಗಲೇ ನಿರ್ಮಾಣವಾಗಿರುವ ಬಡಾವಣೆಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು ಎಂದು ಬೈರತಿ ಸುರೇಶ್ ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ೧೨೬ ಸಿಬ್ಬಂದಿ ಕೊರತೆ ಇದೆ. ಸದ್ಯದಲ್ಲೇ ೬೦ ಹುದ್ದೆ ತುಂಬಲು ಕ್ರಮ ವಹಿಸಲಾಗುವುದು. ಈ ಸಂಬಂಧ ಇದೇ ಮಂಗಳವಾರ ಸಭೆ ನಡೆಸಲಾಗುತ್ತಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಈ ಸಂಬಂಧ ಯೋಜನೆ ರೂಪಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ನಗರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಂದಟ್ಟಿ ಬಳಿ ೧೫ ಎಕರೆ ಜಮೀನು ಗುರುತಿಸಲಾಗಿದೆ. ಅದಕ್ಕೆ ಇದ್ದ ಅಡೆತಡೆ ದೂರವಾಗಿದ್ದು, ಶೀಘ್ರ ಚಾಲನೆ ನೀಡಲಾಗುವುದು ಎಂದು ನುಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಬೈರೇಗೌಡರಿಂದ ಹಿಡಿದು ಹಲವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಚಾಪು ಮೂಡಿಸಿದ್ದಾರೆ. ಈಗಿನ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ರಸ್ತೆಗಳು ಹದಗೆಟ್ಟಿದ್ದು, ಹಳ್ಳಿಯಂತಿರುವ ನಗರಕ್ಕೆ ಮೂಲಸೌಲಭ್ಯ ಒದಗಿಸಲು ಶ್ರಮಿಸುತ್ತಾರೆಂಬ ಭರವಸೆ ಇದೆ ಎಂದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಎಂ.ಶಶಿಧರ್, ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಆದಿನಾರಾಯಣ ಇದ್ದರು. ಪತ್ರಕರ್ತರ ಸಂಘದ ಖಜಾಂಚಿ ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ವಂದಿಸಿದರು.