

ಪಿರಿಯಾಪಟ್ಟಣ: ಎನ್‌ಜಿಒಗಳು ಮಹಿಳೆಯರ ಆರ್ಥಿಕ ಸಬಲೀಕರಣದ ಜತೆಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯ ಸುಧಾರಣಾ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇ ಕಿದೆ ಎಂದು ಧಾನ್ ಫೌಂಡೇಷನ್ ಮೈಸೂರು ವಲಯ ಸಂಯೋಜಕ ಶಂಕರ್‌ಪ್ರಸಾದ್ ಸಲಹೆ ನೀಡಿದರು.
ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟದ ಸರ್ವ ಸದಸ್ಯರ 11ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಂಸ್ಥೆಯ ವತಿಯಿಂದ ಸಂಘದಲ್ಲಿ ಸಿಗುವ ಸವಲತ್ತುಗಳನ್ನು ಸದಸ್ಯರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣವಾಗುವಂತೆ ಕರೆ ನೀಡಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಶ್ವೇತಾ ಮಾತನಾಡಿ, ಗ್ರಾಮಾಂತರ ಪ್ರದೇಶದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸಂಘ-ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.
ಒಕ್ಕೂಟದ ವ್ಯವಸ್ಥಾಪಕ ನಾರಾಯಣ ಹೆಗಡೆ ಮಾತನಾಡಿ, ಕರೊನಾ ಸಂಕಷ್ಟದ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗೆ ಕರೊನಾ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟದ ಅಧ್ಯಕ್ಷೆ ಲತಾ, ಧಾನ್ ಫೌಂಡೇಷನ್ ಸಂಸ್ಥೆಯ ಮಂಜುನಾಥ್, ಪ್ರಭುಶಂಕರ್, ಹುಸೇನ್, ಭಾಗ್ಯ, ಜ್ಯೋತಿ ಮತ್ತಿತರರಿದ್ದರು.