ಹ್ಯಾಂಡ್‌ಪೋಸ್ಟ್ ಸಮೀಪದ ಸಂಪರ್ಕ ಸೇತುವೆ ಬಂದ್

31-pnp 3A (1)
ಪಾಂಡವಪುರ ತಾಲೂಕಿನ ಎಲೆಕೆರೆ ಸಮೀಪದ ಸಂಪರ್ಕ ಸೇತುವೆಯ ಎರಡು ಬದಿಗಳಲ್ಲೂ ಬ್ಯಾರಿಕೇಡ್ ಅಳವಡಿಸಿರುವುದು.
Published on

ಪಾಂಡವಪುರ: ತಾಲೂಕಿನ ಎಲೆಕೆರೆ ಹ್ಯಾಂಡ್‌ಪೋಸ್ಟ್ ಸಮೀಪದ ಸಂಪರ್ಕ ಸೇತುವೆ ಕುಸಿಯುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ಸೇತುವೆಗೆ ಬ್ಯಾರಿಕೇಡ್‌ಗಳನ್ನು ಅಡ್ಡಹಾಕಿ ಸಂಚಾರ ಬಂದ್ ಮಾಡಲಾಗಿದೆ.

ಪಾಂಡವಪುರ ಪಟ್ಟಣದಿಂದ ಕೆಆರ್‌ಎಸ್, ಕೆ.ಆರ್.ಪೇಟೆ, ಚನ್ನರಾಯಪಟ್ಟಣ, ಹಾಸನ, ಧರ್ಮಸ್ಥಳ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಇದಾಗಿದೆ. ನಿತ್ಯ ನೂರಾರು ಸರ್ಕಾರಿ ಬಸ್‌ಗಳು, ಪ್ರಯಾಣಿಕರನ್ನು ಸಾಗಿಸುವ ಆಟೋಗಳು, ಗೂಡ್ಸ್ ವಾಹನಗಳು, ಶಾಲಾ ಕಾಲೇಜುಗಳ ಬಸ್‌ಗಳು ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ. ಈ ಸೇತುವೆ ಅಳವಡಿಸಲಾಗಿರುವ ಕಬ್ಬಿಣದ ಪ್ಲೇಟ್‌ಗಳಲ್ಲಿ ಬಿರುಕು ಮೂಡಿದ್ದು, ವಾಹನಗಳ ಸಂಚಾರದಿಂದ ಸೇತುವೆ ಮೇಲೆ ಒತ್ತಡ ಹೆಚ್ಚಾಗಿ ಕೆಳಮುಖವಾಗಿ ಬಾಗಿ ಅಪಾಯ ಸಂಭವಿಸಬಹುದಾದ ಸಾಧ್ಯತೆ ಹೆಚ್ಚಿತ್ತು.

ಈ ಸಂಬಂಧ ವಿಜಯವಾಣಿಯಲ್ಲಿ ನ.26 ರಂದು ಸಂಪರ್ಕ ಸೇತುವೆ ಕುಸಿಯುವ ಭೀತಿ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಜನಪ್ರತಿನಿಧಿಗಳು ಮತ್ತು ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ಸೇತುವೆ ಪರಿಶೀಲಿಸಿ ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬ ಕಾರಣಕ್ಕೆ ಸಂಚಾರ ಬಂದ್ ಮಾಡಿಸಿದ್ದಾರೆ. ಈಗ ಪಕ್ಕದಲ್ಲಿರುವ ಏಳೆಂಟು ದಶಕಗಳ ಹಳೆಯದಾದ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಈ ಸೇತುವೆಯೂ ತೀರಾ ಕಿರಿದಾಗಿದ್ದು, ಎರಡು ಬಾರಿ ವಾಹನಗಳು ಒಮ್ಮೆಲೆ ಸಂಚರಿಸಲು ಸಾಧ್ಯವಿಲ್ಲ. ಹಳೆಯ ಸೇತುವೆಯೂ ಕೂಡ ಶಿಥಿಲಾವಸ್ಥೆ ತಲುಪಿದ್ದು, ಶೀಘ್ರ ಸೇತುವೆ ದುರಸ್ತಿ ಮಾಡಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net