

ನಂಜನಗೂಡು: ದಾಸ್ಯ ಮುಕ್ತಿಗಾಗಿ ಹೋರಾಟ ಮಾಡಿದವರ ಆದರ್ಶಗಳು ನಮಗೆ ದಾರಿದೀಪವಾಗಲಿ ಎಂದು ಶಾಸಕ ದರ್ಶನ್ ಧೃವನಾರಾಯಣ್ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್ ಮೊದಲಾದವರ ಜೀವನ ನಮಗೆ ಆದರ್ಶವಾಗಬೇಕು. ಸ್ವಾತಂತ್ರ್ಯ ಹೋರಾಟಗಾರರು ಬದುಕನ್ನೇ ದೇಶಕ್ಕಾಗಿ ಮುಡಿಪಿಟ್ಟಿದ್ದು ಮಾದರಿಯಾಗಬೇಕು. ಅವರನ್ನು ಸ್ಮರಿಸಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕಿದೆ ಎಂದರು.
ಭಾರತೀಯರೆಲ್ಲರಿಗೂ ಅತ್ಯಂತ ಪವಿತ್ರವಾದ ದಿನ ಆಗಸ್ಟ್ 15. ಈ ದಿನವನ್ನು ಅರ್ಥಪೂರ್ಣಗೊಳಿಸೋಣ ಎಂದರು.
ಇತಿಹಾಸ ತಜ್ಞ ಪಿ.ವಿ.ನಂಜರಾಜೇ ಅರಸ್ ಮಾತನಾಡಿ, ಮೇಲು- ಕೀಳು ಹಾಗೂ ಜಾತಿ ಧರ್ಮದ ಭೇದ ಮರೆತು ದೇಶದ ನಾಗರಿಕರೆಲ್ಲರೂ ಒಂದೇ ಎಂಬ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿಯನ್ನು ಸಾರುವ ಗೀತೆಗಳಿಗೆ ಸಾಮೂಹಿಕ ನೃತ್ಯದ ಮೂಲಕ ರಂಜಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಡಿವೈಎಸ್ಪಿ ಗೋವಿಂದರಾಜು, ತಾ.ಪಂ. ಇಒ ಜೆರಾಲ್ಡ್ ರಾಜೇಶ್, ಬಿಇಒ ಶಿವಲಿಂಗಯ್ಯ, ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭೆ ಸದಸ್ಯರುಗಳಾದ ಗಾಯತ್ರಿ, ಮಹೇಶ್ ಮೊದಲಾದವರು ಭಾಗವಹಿಸಿದ್ದರು.