ಹೋರಾಟ ಮಾತ್ರವಲ್ಲ, ಹೊಸ ಕಲ್ಪನೆಯೊಂದಿಗೆ ರಾಜ್ಯೋತ್ಸವ

RMGM - Photo-01-Raitha Sanga-Rajyotsava Apmc - Ramanagara-22-11-2021
Published on

ರಾಮನಗರ: ರೈತ ಸಂಘ ಬರೀ ಹೋರಾಟಗಳಿಗೆ ಸೀಮಿತಗೊಳ್ಳದೆ ಸಾಂಸ್ಕೃತಿಕವಾಗಿಯೂ ಮುನ್ನಡೆಯಬೇಕು ಎಂಬ ನಿಟ್ಟಿನಲ್ಲಿ ಹೊಸ ಕಲ್ಪನೆಯೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ರೈತ ಸಂದ ರಾಮನಗರ ಜಿಲ್ಲಾಧ್ಯಕ್ಷ ಎಚ್.ಬಿ. ಚಂದ್ರಶೇಖರ್ ತಿಳಿಸಿದರು.

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಸೋಮವಾರ ಪೂಜೆ ಸಲ್ಲಿಸಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಬಹಳಷ್ಟು ಜನ ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗುವ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಇದಕ್ಕೆ ರೈತ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು.

ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಇದು ಸ್ವಾಗತಾರ್ಹವಾಗಿದೆ. ಕೂಡಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಬಿಲ್ ಅಂಗೀಕರಿಸಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಕಾಯ್ದೆಗಳನ್ನು ಚಿಂತಕರು, ಕೃಷಿಕರು, ರೈತ ಸಂಟನೆಗಳ ಜತೆ ಚರ್ಚಿಸಿ ಜಾರಿಗೆ ತರಬೇಕಾಗಿದೆ ಎಂದರು.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಂದಿಷ್ಟು ಸಮಸ್ಯೆಗಳು ಉಂಟಾದರೂ, ಬಹಳಷ್ಟು ವರ್ಷಗಳಿಂದ ನೀರಿಲ್ಲದೆ ಭಣಗುಡುತ್ತಿದ್ದ ಕೆರೆ-ಕಟ್ಟೆಗಳು ಇಂದು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಇದು ಸಂತಸ ತಂದರೆ, ಬೆಳೆಗಳು ನೀರಿನಲ್ಲಿ ತೋಯ್ದು ರೈತರಿಗೆ ನಷ್ಟ ಉಂಟು ಮಾಡಿದೆ. ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದರು.

ಗೌರವಾಧ್ಯಕ್ಷ ಅನಂತರಾಮು, ಉಪಾಧ್ಯಕ್ಷ ಟಿ.ಪಿ. ಚಂದ್ರಶೇಖರ್, ಕಾರ್ಯದರ್ಶಿ ರಾಜಣ್ಣ, ರಾಮನಗರ ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಮಾಗಡಿ ತಾಲೂಕು ಅಧ್ಯಕ್ಷ ಗೋವಿಂದರಾಜು, ಚನ್ನಪಟ್ಟಣ ತಾಲೂಕು ಅಧ್ಯಕ್ಷ ರಮೇಶ್, ಕನಕಪುರ ತಾಲೂಕು ಅಧ್ಯಕ್ಷ ಅನಂತರಾಮು ಮುಖಂಡರಾದ ಪಾದ್ರಳ್ಳಿ ಕೃಷ್ಣಪ್ಪ, ವಿಜಯಪುರ ಕಾಂತರಾಜು, ಪ್ಯಾರು ಅಹ್ಮದ್, ದೇವರದೊಡ್ಡಿ ರಾಮಣ್ಣನಾಯ್ಕ, ಶಿವರುದ್ರಯ್ಯ, ಡಣಾಯ್ಕನಪುರ ರಾಮಣ್ಣ, ಸೇರಿ ರೈತ ಮುಖಂಡರು ಭಾಗವಹಿಸಿದ್ದರು.

ರೈತರ ಹೋರಾಟದಲ್ಲಿ ಪತ್ರಕರ್ತರ ಸಹಕಾರ ಅಮೂಲ್ಯ ಕೃಷಿ ಕಾಯ್ದೆ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಲ್ಲಿ ರೈತರು ನಡೆಸಿದ ಹೋರಾಟದಲ್ಲಿ ಪತ್ರಕರ್ತರ ಸಹಕಾರ ಕೂಡ ಅಮೂಲ್ಯವಾಗಿದೆ. ರೈತ ಸಂಟನೆಗಳು ಬರೀ ಹೋರಾಟಕ್ಕೆ ಸೀಮಿತವಾಗದೆ ಸಾಂಸ್ಕೃತಿಕವಾಗಿಯೂ ಸಿದ್ಧವಿದೆ ಎಂಬುದನ್ನು ಹೊಸ ಕಲ್ಪನೆಯೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಿ ತೋರಿಸಿದೆ. ಮುಂದಿನ ದಿನಗಳಲ್ಲಿ ಹೋರಾಟದ ಜತೆ ಸಂಟನೆಯನ್ನು ಸಾಂಸ್ಕೃತಿಕವಾಗಿಯೂ ತೆಗೆದುಕೊಂಡು ಹೋಗಬೇಕು ಎಂದು ರೈತ ಸಂದ ಕಾನೂನು ಸಲಹೆಗಾರ ಮೃತ್ಯುಂಜಯ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net