ಹೋಮ ನಡೆಯುವ ಸ್ಥಳಗಳಲ್ಲಿ ದೈವ ಶಕ್ತಿ ನೆಲೆ

8 nrp 3 swamiji
ಎನ್.ಆರ್.ಪುರ ತಾಲೂಕು ಅರಸಿನಗೆರೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು. ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ, ಕೆ.ಎನ್.ಸುಧಾಕರ, ಎ.ಎಸ್.ಮಂಜುನಾಥ್, ಅಶ್ವಿನಿ, ಕೆ.ಎಂ.ಸುಂದರೇಶ್, ಎ.ಬಿ.ಮಂಜುನಾಥ್ ಇದ್ದರು.
Published on

ಎನ್.ಆರ್.ಪುರ: ಹೋಮ, ಹವನ, ಯಜ್ಞ ಯಾಗಾದಿಗಳು ನಡೆಯುವ ಸ್ಥಳಗಳಲ್ಲಿ ದೈವ ಶಕ್ತಿ ನೆಲೆಯಾಗುತ್ತದೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಕಡಹಿನಬೈಲು ಗ್ರಾಪಂಯ ಅರಸಿನಗೆರೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಆಶೀರ್ವಚನ ನೀಡಿದರು.

ದೇವಾಲಯಗಳಲ್ಲಿ ಸಿದ್ಧಿ ಪುರುಷರ ಸಿದ್ಧತ್ವ ಅಡಗಿರುತ್ತದೆ. ಅನೇಕ ಪವಾಡಗಳೇ ಇಲ್ಲಿ ನಡೆದುಹೋಗಿವೆ. ಮನುಷ್ಯ ಸಂಕಟ ಬಂದಾಗ ಮಾತ್ರ ದೇವರನ್ನು ನೆನೆಯುತ್ತಾನೆ. ಸುಖ ಬಂದಾಗ ದೇವರು ಕಣ್ಣಿಗೆ ಕಾಣುವುದಿಲ್ಲ. ಇದು ಕಲಿಯುಗವಾಗಿದೆ. ಈಗ ನೀತಿ,ಧರ್ಮಕ್ಕೆ ಕಂಟಕಗಳು ಬರುತ್ತಿದೆ. ಅಧರ್ಮ ವಿಜೃಂಭಿಸುತ್ತಿದೆ. ಹೀಗಾಗಿ ನೀತಿವಂತರು, ಸತ್ಯವಂತರು ಜಾಗ್ರತರಾಗಿರಬೇಕು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಗ್ರಾಮ ಆರೋಗ್ಯವಾಗಿರಬೇಕಾದರೆ ಶಾಲೆ, ಆಸ್ಪತ್ರೆ, ದೇವಸ್ಥಾನ, ಮಸೀದಿ, ಚರ್ಚ್‌ಗಳು ಪ್ರಮುಖ ಪಾತ್ರ ವಹಿಸಲಿವೆ. ಭಾರತ ಧಾರ್ಮಿಕ ಭದ್ರ ಬುನಾದಿ ಮೇಲೆ ನಿಂತಿದೆ. ಇಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳು ಸಮಾಜದ ನೆಮ್ಮದಿಗೆ ಸಹಕಾರಿಯಾಗಿದೆ. ಇದರಲ್ಲಿ ಮಠಾಧೀಶರ, ಸಾಧುಸಂತರ ಕೊಡುಗೆ ಅಪಾರವಾಗಿದೆ. ಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಧರ್ಮದಿಂದ ನಡೆದಾಗ ಮಾತ್ರ ಸಮಾಜ ಉತ್ತಮವಾಗಿರುತ್ತದೆ. ದೇವರಲ್ಲಿ ಶ್ರದ್ಧೆ, ಭಯ, ಭಕ್ತಿ ಎಲ್ಲವೂ ಇರಬೇಕು ಎಂದರು.

ದೇವಸ್ಥಾನದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 20 ಲಕ್ಷ ರೂ. ನೀಡಿದ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ದೇವಸ್ಥಾನದ ಸಮಿತಿಯಿಂದ ಸನ್ಮಾನಿಸಲಾಯಿತು. ಬಸ್ತಿಮಠದ ಶ್ರೀಗಳನ್ನು ಗೌರವಿಸಲಾಯಿತು. ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಎ.ಎಲ್.ಮಹೇಂದ್ರ, ಎ.ಡಿ.ಉಮೇಶ, ಪುರೋಹಿತರಾದ ಜಗದೀಶ್ ಭಟ್ ಅವರನ್ನು ಸನ್ಮಾನಿಸಲಾಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್.ಸುಧಾಕರ, ಗೌರವಾಧ್ಯಕ್ಷ ಎ.ಎಸ್.ಮಂಜುನಾಥ, ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net