ಹೋಟೆಲ್ ಉದ್ಯಮ ಇನ್ನಷ್ಟು ಬೆಳೆಯಲಿ: ಉಷಾ

26-gdg-12
Published on

ಗದಗ: ಕರಾವಳಿಯ ಉದ್ಯಮಿಗಳು ಗದಗ-ಬೆಟಗೇರಿಯಲ್ಲಿ ಹೋಟೆಲ್ ಉದ್ಯಮವನ್ನು ಪ್ರೋತ್ಸಾಹಿಸಿದ್ದು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಹೋಟೆಲ್ ಉದ್ಯಮ ಉತ್ತರೋತ್ತರವಾಗಿ ಬೆಳೆಯಲಿ ಎಂದು ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದರು.

ನಗರದ ವೀರನಾರಾಯಣ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಹೋಟೆಲ್ ಒಡೆಯರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರವಾಸೋದ್ಯಮದ ಪುನಶ್ಚೇತನದಿಂದ ಹೋಟೆಲ್ ಉದ್ಯಮದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದ್ದು, ಕರೊನಾದಿಂದ ಹೋಟೆಲ್ ಉದ್ಯಮಿಗಳಿಗೆ ಆರ್ಥಿಕ ನಷ್ಟವಾಗಿರುವುದು ಬೇಸರದ ಸಂಗತಿಯಾಗಿದೆ. ಕನ್ನಡನಾಡಿನ ಸಾಂಸ್ಕøತಿಕ ಶ್ರೀಮಂತಿಕೆ ಸಾರುವ ಯಕ್ಷಗಾನ ಪ್ರದರ್ಶನವನ್ನು ಹೋಟೆಲ್ ಒಡೆಯರ ಸಂಘದವರು ಆಯೋಜಿಸಿರುವುದು ಅಭಿನಂದನೀಯವಾಗಿದ್ದು, ಮೊಬೈಲ್ ಸಮೂಹ ಮಾಧ್ಯಮಗಳ ಗೀಳಿನಲ್ಲಿ ಸಿಲುಕಿರುವ ಯವ ಜನತೆಯನ್ನು ಯಕ್ಷಗಾನದಂತಹ ಕಲೆಯತ್ತ ಸೆಳೆಯಬೇಕಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಮಾತನಾಡಿ, ಹೋಟೆಲ್ ಉದ್ಯಮಕ್ಕೂ ನನಗೂ ಅವಿನಾಭಾವ ಸಂಬಂಧವಿದ್ದು, ಹೈಸ್ಕೂಲು ದಿನಗಳಲ್ಲಿ ನಮ್ಮ ಚಿಕ್ಕಪ್ಪನ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ನೆನಪಿದೆ. ಹೋಟೆಲ್‍ಗಳು ಜೀವನದ ಅವಿಭಾಜ್ಯ ಅಂಗವೇ ಆಗಿಹೋಗಿದ್ದು, ಹೋಟೆಲ್ ನಿರ್ಮಾಣಕ್ಕೆ ಜಾಗೆ ಬೇಕಿದ್ದಲ್ಲಿ ನಗರಾಭಿವೃದ್ಧಿ ಪ್ರಾ„ಕಾರದ ನಿಯಮಗಳ ಅನ್ವಯ ಹಸ್ತಾಂತರಿಸಲು ಸಿದ್ಧರಿದ್ದೇವೆ ಎಂದರು.

ನೂತನ ಹೋಟೆಲ್ ಒಡೆಯರ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಶಂಕರ್ ಹಾನಗಲ್, ಕಾರ್ಯದರ್ಶಿಯಾಗಿ ಅಮೃತರಾವ, ಸಹ ಕಾರ್ಯದರ್ಶಿಯಾಗಿ ಪ್ರಲ್ಹಾದ ಕಾರ್ಕಳ, ಖಜಾಂಚಿಯಾಗಿ ಜಯಪಾಲ ಶೆಟ್ಟಿ ನೇಮಕಗೊಂಡರು.

ನೂತನ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಹಾಗೂ ಕಿಟ್ ವಿತರಣೆಯಂತಹ ಸಮಾಜಮುಖಿ ಕೆಲಸಗಳನ್ನು ಹೋಟೆಲ್ ಒಡೆಯರ ಸಂಘ ಮಾಡುತ್ತ ಬಂದಿದ್ದು, ಆದರೆ, ಈ ವಿಷಯದಲ್ಲಿ ಹೆಚ್ಚಿನ ಪ್ರಚಾರ ಬಯಸಿಲ್ಲ. ನಮ್ಮ ಸಂಘದ ಹೆಸರಿನಲ್ಲಿರುವ ಜಾಗೆಯಲ್ಲಿ ಹೋಟೆಲ್ ಒಡೆಯರ ಸಂಘದ ಸಮುದಾಯ ಭವನ ನಿರ್ಮಾಣವಾಗಬೇಕೆನ್ನುವುದು ಗುರಿಯಾಗಿದ್ದು, ಇದರೊಂದಿಗೆ ಅನೇಕ ಸಾಮಾಜಿಕ ಕಾಳಜಿಯುಳ್ಳ ಕೆಲಸಗಳನ್ನು ಮಾಡಬೇಕೆಂಬ ಇಚ್ಛೆ ಇದೆ, ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು.

ವೇದಿಕೆ ಮೇಲೆ ಸಂಘದ ಗೌರವಾಧ್ಯಕ್ಷ ಸುಧಾಕರ ರಾವ, ನಿಕಟಪೂರ್ವ ಅಧ್ಯಕ್ಷ ರಾಜೀವ ಶೆಟ್ಟಿ ಇದ್ದರು. ರೋಟರಿ ಸಂಸ್ಥೆ ವತಿಯಿಂದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಪದಗ್ರಹಣದ ನಂತರ ಹಟ್ಟಿಯಂಗಡಿ ಮೇಳದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಜರುಗಿತು. ಶಂಕರ್ ಹಾನಗಲ್ ಸ್ವಾಗತಿಸಿದರು. ಡಾ.ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಹೋಟೆಲ್ ಒಡೆಯರ ಸಂಘದ ಸಂಚಾಲಕ ಡಾ.ಕಾವೆಂಶ್ರೀ ವಂದಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net