

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸಿದ್ದರಾಮಯ್ಯ ಮಾಡುವುದಿಲ್ಲ. ಬದಲಿಗೆ ಈ ಬಾರಿ ಹೊಸ ಮುಖ್ಯಮಂತ್ರಿ ದಸರಾ ಉದ್ಘಾಟಿಸಲಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ಒಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಸದನದಲ್ಲಿಯೂ ಹೇಳಿದ್ದೇನೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಿಎಂ ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿದೆ. ಕೆಲ ಸಚಿವರು ಕೂಡ ಈ ಸಂಬಂಧ ನಾನಾ ಹೇಳಿಕೆ ನೀಡುತ್ತಿದ್ದಾರೆ. ದಸರಾ ಮಹೋತ್ಸವ ಆರಂಭದ ಒಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಪದವಿಯ ಅಧಿಕಾರ ಹಸ್ತಾಂತರ ಮೊದಲೇ ನಿಶ್ಚಯವಾಗಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಹೇಳಿದ್ದನ್ನು ಈಗ ಕಾಂಗ್ರೆಸ್‌ನ ಶಾಸಕರು ಮತ್ತು ಸಚಿವರು ಹೇಳುತ್ತಿದ್ದಾರೆ. ಆದರೂ ಸಿದ್ದರಾಮಯ್ಯ ಏನೂ ಆಗಿಲ್ಲ ಎಂಬ ರೀತಿ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಅಧಿಕಾರದ ಕಿತ್ತಾಟ ಆರಂಭವಾಗಿದೆ. ಮುಂದೆ ಇದು ತಾರಕಕ್ಕೆ ಏರುವ ಲಕ್ಷಣ ಇದೆ. ಈ ಭ್ರಷ್ಟ ಸರ್ಕಾರ ಯಾವಾಗ ಬಿದ್ದು ಹೋಗುತ್ತದೆಯೋ ಎಂದು ಜನರು ಕಾಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದುಕೊಂಡು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿನ ಕಷ್ಟದ ಅರ್ಥವೇ ಆಗಿಲ್ಲ. ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿದ್ದ ಬಗ್ಗೆ ಮೊದಲು ತನ್ನ ನಿಲುವು ಏನೆಂದು ಸ್ಪಷ್ಟಪಡಿಸಬೇಕು. ತುರ್ತು ಪರಿಸ್ಥಿತಿ ಹೇರಿದ್ದು ಸರಿ ಎನ್ನುವುದೇ ಕಾಂಗ್ರೆಸ್‌ನ ಮನಸ್ಥಿತಿ ಆಗಿದ್ದರೆ ಅದನ್ನು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ಈ ದೇಶದ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಈಗಲೂ ಅಘೋಷಿತ ತುರ್ತು ಪರಿಸ್ಥಿತಿ ಎಂದು ಹೇಳಿದ್ದಾರೆ. ಯಾವುದು ಅಘೋಷಿತ ತುರ್ತು ಪರಿಸ್ಥಿತಿ? ಮಲ್ಲಿಕಾರ್ಜುನ ಖರ್ಗೆ ಅವರೇ ನಿಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿಲ್ಲವೇ? ಭಾರತದ ಬಗ್ಗೆ ಅಮೆರಿಕಕ್ಕೆ ಹೋಗಿ ಮಾತನಾಡಲು ಅವಕಾಶ ಕೊಟ್ಟಿಲ್ಲವೇ? ನಿಮಗೆ ಯಾವುದಕ್ಕೆ ನಿರ್ಬಂಧ ಇದೆ ಹೇಳಿ? ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಎಂದು ಆಕ್ರೋಶವ್ಯಕ್ತಪಡಿಸಿದರು.