

ವಿವಿಧತೆಗೆ ಧಕ್ಕೆಯಾಗುವಂತಹ ರಾಜಕೀಯ ಸನ್ನಿವೇಶಗಳು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಚಿಂತಕರು, ಸಾಹಿತಿಗಳು ಹೊಸ ಸಂಗ್ರಾಮದ ಮೂಲಕವಾದರೂ ಸಮೃದ್ಧ ಭಾರತ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಭಾನುವಾರ ವಿಸ್ಮಯ ಬಳಗವು ಆಯೋಜಿಸಿದ್ದ ವಿಸ್ಮಯ 25 ಬೆಳ್ಳಿ ಬೆರಗು ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ತಪ್ಪು ದಾರಿಗೆ ಹೋಗುವವರಿಗೆ ಸರಿದಾರಿ ತೋರಿಸುವ ಬೌದ್ಧಿಕ ಶಕ್ತಿಗಳು ನಮ್ಮಲ್ಲಿವೆ. ಧರ್ಮ ಕೊಳೆತು ನಾರುವ ಪರಿಸ್ಥಿತಿಯಲ್ಲಿದೆ. ನಾವು ಸಂಶೋಧನೆಗಳ ಮೂಲಕ ಇತಿಹಾಸವನ್ನು ತಿಳಿಸಬೇಕು. ಸಂಶೋಧನೆಗೆ ಒಳಪಡದಿದ್ದರೆ ಅದು ಇತಿಹಾಸವೇ ಅಲ್ಲ ಎಂದು ಹೇಳಿದರು.
ಪ್ರಕಾಶ್ ಚಿಕ್ಕಪಾಳ್ಯ ಗುರುತಿಗೆ ಸಿಗಲಾರದ ಅಸಾಧಾರಣ ಪ್ರತಿಭೆ. ಅವರ ಕಲಾ ನೈಪುಣ್ಯವನ್ನು ನಾನು ನೋಡಿದ್ದೇನೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪ್ರಕಾಶ್ ಚಿಕ್ಕಪಾಳ್ಯ ಅವರು ಯಾವುದೇ ಒಂದು ವೇದಿಕೆಗೆ ಅರ್ಥಪೂರ್ಣ ಸ್ವರೂಪ ಕೊಡುತ್ತಾರೆ. ಕಲಾ ಕ್ಷೇತ್ರಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ ತೊಡಗಿಸಿಕೊಂಡರೆ ಹೇಗೆ ಬೆಳೆಯಬಹುದು ಎಂಬುದನ್ನು ತೋರಿಸಿದ್ದಾರೆ. ಅವರ ಬದುಕೆ ಒಂದು ವಿಸ್ಮಯ ಎಂದು ಶ್ಲಾಘಿಸಿದರು.
ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ರಾಜಕೀಯ ಮತ್ತು ಧರ್ಮದ ಒಡೆದು ಆಳುವ ನೀತಿಯ ನಡುವೆ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವುದು ಕಲೆ ಮಾತ್ರ. ಈ ವೇದಿಕೆಯಲ್ಲಿ ರಾಜಕೀಯದವರು, ಧರ್ಮದವರು, ಮಾಧ್ಯಮದವರು ಮತ್ತು ಕಲಾ ಕ್ಷೇತ್ರವದರು ಇದ್ದಾರೆ. ನಾವು ಈ ಕ್ಷೇತ್ರಗಳ ನಡುವೆ ಒಡನಾಟವಿಲ್ಲದ ವಿಚಿತ್ರ ಸಂದರ್ಭದಲ್ಲಿದ್ದೇವೆ ಎಂದರು.
ಈ ಕಾರ್ಯಕ್ರಮಕ್ಕೆ ಹಾಜರಾಗಿರುವ ಅನೇಕರು ಹಳ್ಳಿಯಿಂದ ಬಂದವರು. ದೇಸಿ ಜ್ಞಾನದ ಸಹಬಾಳ್ವೆ ಇಲ್ಲಿ ಎದ್ದು ಕಾಣುತ್ತದೆ. ಸಹಬಾಳ್ವೆ ಮತ್ತು ನಿಷ್ಕಲ್ಮಶವಾದ ಪ್ರೀತಿ ಇದೆ. ಎಲ್ಲವನ್ನೂ ಲಾಭದ ದೃಷ್ಟಿಯಿಂದ ನೋಡುವ ಈ ಕಾಲಘಟ್ಟದಲ್ಲಿ ನಾವು ಪ್ರೀತಿಯಿಂದ ನೋಡಿದರೆ ಬೇರೆಯದೇ ಲೋಕಕ್ಕೆ ಹೋಗಬಹುದು ಎಂದರು.
ಇಂದಿನ ಯುಗದಲ್ಲಿ ಪ್ರತಿಭೆಯೊಂದಿದ್ದರೆ ಸಾಲದು ಮಾರುಕಟ್ಟೆಯ ಜ್ಞಾನವೂ ಮುಖ್ಯ. ಏಕೆಂದರೆ ಚಿಕ್ಕಪಾಳ್ಯ ಅವರು ಹೊರಗೆ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನ ಪ್ರಕಾಶ್ ಅವರ ಪ್ರತಿಭೆಯನ್ನು ತೋರಿಸುತ್ತದೆ, ಆದರೆ ಅದಕ್ಕೆ ಸೂಕ್ತ ಮಾರುಕಟ್ಟೆ ದೊರೆಯಬೇಕು ಎಂದು ಆಶಿಸಿದರು.
ಬೆಳ್ಳಿ ಬೆರಗು ಮಾಲಿಕೆಯಲ್ಲಿ ನಾಡಿನ ಖ್ಯಾತ ಲೇಖಕರ 12 ಪುಸ್ತಕಗಳನ್ನು ಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್‌ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿ, ಪ್ರಕಾಶ್ ಚಿಕ್ಕಪಾಳ್ಯ ಮತ್ತಷ್ಟು ವಿಸ್ಮಯಕಾರಿಯಾಗಿ ಸಮಯ ಪ್ರಜ್ಞೆಯೊಂದಿಗೆ ಬೆಳೆಯಲಿ. ಚಿತ್ರಕಲಾ ಪ್ರದರ್ಶನ ಅದ್ಭುತವಾಗಿದೆ. ಇಲ್ಲಿ ಪ್ರಕಾಶ್ ಚಿಕ್ಕಪಾಳ್ಯ ಅವರ ಚಿತ್ರಕಲಾ ಪ್ರದರ್ಶನ ಸೊಗಸಾಗಿದೆ ಎಂದು ಬಣ್ಣಿಸಿದರು.
ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಈಗ ಸಾಹಿತ್ಯಕ್ಕೆ ಇರುವುದು ವಿಶ್ವಾಸಾರ್ಹತೆಯ ಪ್ರಶ್ನೆಯೇ ಹೊರತು ಕ್ರಿಯಾಶೀಲತೆಯ ಪ್ರಶ್ನೆಯಲ್ಲ. ಏನೂ ಇಲ್ಲದೆ ಬಂದ ಪ್ರಕಾಶ್ ತನ್ನದೇ ಆದ ಬಣ್ಣದ ಶೈಲಿಯ ಚಿತ್ರಗಾರಿಕೆ ಮಾಡಿದ್ದು ಹೆಚ್ಚುಗಾರಿಕೆ ಎಂದರು.
ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಶಿವಯೋಗಿ ಸ್ವಾಮೀಜಿ, ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಕ ಸೇವಾ ಟ್ರಸ್ಟ್‌ನ ಶ್ರೀ ಅರ್ಜುನ ಅವಧೂತರು, ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ, ವಿಶ್ರಾಂತ ಪ್ರಾಧ್ಯಾಪಕ ನೀಲಗಿರಿ ಎಂ.ತಳವಾರ್, ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ, ಪ್ರೊ.ಸಿ.ನಾಗಣ್ಣ, ಪ್ರೊ.ಮೊರಬದ ಮಲ್ಲಿಕಾರ್ಜುನ, ಡಾ.ಕೆ.ಸಿ.ಶಿವಪ್ಪ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಕೆಂಪೆಗೌಡ, ಡಾ.ಜ್ಯೋತಿ ಶಂಕರ್, ಡಾ.ಮೀರಾ ಶಿವಲಿಂಗಯ್ಯ, ಓಂಕಾರ್ ಪ್ರಿಂಟರ್ಸ್‌ನ ವೆಂಕಟೇಶ್‌ಬಾಬು, ಡಾ. ತಿಮ್ಮೇಗೌಡ, ಡಾ. ಲತಾ ರಾಜಶೇಖರ್ ಇದ್ದರು.
ಇದೇ ವೇಳೆ ಪ್ರಕಾಶ್ ಚಿಕ್ಕಪಾಳ್ಯ ಅವರ ಕಲಾಚಿತ್ರಗಳ ಪ್ರದರ್ಶನನ್ನು ಆಯೋಜಿಸಲಾಗಿತ್ತು. ಬಳಿಕ ವಿಸ್ಮಯ ಮಾಧ್ಯಮ ಪ್ರೀತಿ ಕಾರ್ಯಕ್ರಮ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅಧ್ಯಕ್ಷತೆಯಲ್ಲಿ, ವಿಸ್ಮಯ ಸಮಾಜ ಪ್ರೀತಿ ಕಾರ್ಯಕ್ರಮ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ, ಶ್ರೀ ಆದಿಚುಂಚನಗಿರಿ ಮಠದ ಡಾ.ಶ್ರೀ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಸ್ಮಯ ಧಾರ್ಮಿಕ ಪ್ರೀತಿ ಕಾರ್ಯಕ್ರಮ ನೆರವೇರಿತು.