ಹೊಸ ಗಿಡಗಳ ರಕ್ಷಣೆಗೆ ಕವಚ ಅಳವಡಿಕೆ

2fad8e54-653e-4b11-9dea-25e92df17810
Published on

ನಲವತ್ತು ಮರಗಳಿಗೆ ಪರ್ಯಾಯವಾಗಿ ಅದೇ ಜಾಗದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನೆಡಲಾಗಿರುವ ಗಿಡಗಳಿಗೆ ಗುರುವಾರ ಗಾರ್ಡ್‌ಗಳನ್ನು ಹಾಕುವ ಮೂಲಕ ರಕ್ಷಣೆ ಒದಗಿಸಲಾಗಿದೆ.

ರೈತ ಸಂಘದ ಪ್ರಮುಖರು ರಘುಲಾಲ್ ಕಂಪನಿಯ ರಾಘವನ್ ಅವರೊಂದಿಗೆ ಚರ್ಚಿಸಿ, ಮೆಟಲ್ ಗಾರ್ಡ್‌ಗಳನ್ನು ಪಡೆದುಕೊಂಡರು. ಬಳಿಕ ಸಸಿಗಳ ಸುತ್ತ ಮೆಟಲ್ ಗಾರ್ಡ್‌ಗಳನ್ನು ಹಾಕಿ ನೆಲಕ್ಕೆ ಕಾಂಕ್ರೀಟ್ ಹಾಕುವ ಮೂಲಕ ಅದನ್ನು ಭದ್ರಪಡಿಸುವ ಕೆಲಸ ಮಾಡಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ನೇತೃತ್ವದಲ್ಲಿ ಗಿಡಗಳ ರಕ್ಷಣೆಗೆ ಗಾರ್ಡ್‌ಗಳನ್ನು ಅಳವಡಿಸಲಾಗಿದೆ.

ಗ್ರಾಮಸ್ಥರೊಂದಿಗೆ ಚರ್ಚೆ: ಉತ್ತನಹಳ್ಳಿ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಇರುವ ಮರಗಳನ್ನು ಸಂರಕ್ಷಣೆ ಮಾಡುವುದರ ಬಗ್ಗೆ ಗ್ರಾಮದ ಮುಖಂಡರನ್ನು ರೈತ ಸಂಘದ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲದೆ ಗುತ್ತಿಗೆದಾರನೊಂದಿಗೂ ಚರ್ಚೆ ನಡೆಸಲಾಯಿತು. ಗ್ರಾಮದ ಮುಖಂಡರಾದ ಬಸವಣ್ಣ ಕರಿಯಪ್ಪ ಗಂಗಾಧರ್ ಚಂದ್ರು ಹಾಗೂ ಶ್ರೀನಿವಾಸ್, ರೈತ ಮುಖಂಡರಾದ ಮಂಜುಕಿರಣ್, ಮೋಹನ್ ಕುಮಾರ್, ವೆಂಕಟೇಶ್ ಸಿದ್ಲಿಂಗಪುರ, ಕಿರಣ್, ನಾಗೇಂದ್ರ ಇದ್ದರು.

ಇಂದು ಮೌನ ಪ್ರತಿಭಟನೆ:

ರಾತ್ರೋರಾತ್ರಿ 40 ಮರಗಳನ್ನು ಕತ್ತರಿಸಿದ ಘಟನೆ ಖಂಡಿಸಿ ಏ.18ರ ಸಂಜೆ 6.30ಕ್ಕೆ ಮರಗಳು ಕಡಿಯಲ್ಪಟ್ಟ ಜಾಗದಲ್ಲಿ ಕಪ್ಪು ಪಟ್ಟಿ ಧರಿಸಿ, ಮೊಂಬತ್ತಿ ಹಚ್ಚಿ ಮೌನ ಪ್ರತಿಭಟನೆ ನಡೆಸಲು ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ ನಿರ್ಧರಿಸಿದೆ.

18 ಸಂಘ-ಸಂಸ್ಥೆಗಳು ಕೂಡಿ ಕ್ರಿಯಾ ಸಮಿತಿಯನ್ನು ರಚಿಸಿವೆ. 7 ಜನ ತಜ್ಞರ ಸಮಿತಿಯೂ ಸಿದ್ಧವಾಗಿದೆ. ಮರದ ಕಡಿದ 11 ದಿನಕ್ಕೆ ತಿಥಿ ಆಚರಣೆ (ಏ.24) ಮಾಡಲಾಗುವುದು. ಮೌನ ಪ್ರತಿಭಟನೆ ಬಳಿಕ ಮರಗಳನ್ನು ಕಡಿಯಬೇಕಾದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಜ್ಞಾಪನ ಪತ್ರ ನೀಡಲಾಗುವುದು ಎಂದು ಕ್ರಿಯಾ ಸಮಿತಿಯ ಪರಶುರಾಮೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net