ಹೊಲಗಳಲ್ಲಿ ಕಾಯಕ ಮಾಡಿ

Kayak in the fields
ಮುದ್ದೇಬಿಹಾಳದ ಖಾಸ್ಗತೇಶ್ವರ ಮಠದಲ್ಲಿ ಸಾಧನಾ ಮಹಿಳಾ ಒಕ್ಕೂಟದಿಂದ ಖಾಸ್ಗತೇಶ್ವರ ದೀಪೋತ್ಸವದ ಅಂಗವಾಗಿ ಜರುಗಿದ ಚನ್ನಬಸವಣ್ಣನವರ ವಿರಚಿತ ಕರಣ ಹಸಿಗೆ ಪ್ರವಚನ, ಖಾಸ್ಗತೇಶ್ವರ ದೀಪೋತ್ಸವ ಹಾಗೂ ಕಾರ್ತಿಕ ಕಿರಣ ಮಂಗಲೋತ್ಸವಕ್ಕೆ ಇಂಗಳೇಶ್ವರ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು. ಡಾ. ಚೆನ್ನವೀರ ದೇವರು, ಡಾ. ಗುರುಶಾಂತವೀರ ಶಿವಾಚಾರ್ಯರು, ಸಿದ್ಧಲಿಂಗ ಶ್ರೀ, ಸಂಗಯ್ಯ ಸ್ವಾಮಿ, ಗಿರಿಜಾ ಕಡಿ ಇತರರಿದ್ದರು.
Published on

ಮುದ್ದೇಬಿಹಾಳ: ಕೃಷಿಕರು, ಕೃಷಿಕ ಕುಟುಂಬದವರು ದೇವಾಲಯಗಳಿಗೆ ಅಲೆಯುವ ಬದಲು ಹೊಲಗಳಿಗೆ ಹೋಗಿ ಕಾಯಕ ಮಾಡಬೇಕು.

ಅದರಿಂದ ಸಂಪಾದಿಸುವ ಹಣ ಬೆವರಿನ ಪರಿಶ್ರಮದಿಂದ ಬಂದಿರುತ್ತದೆ ಎಂದು ಇಂಗಳೇಶ್ವರ ವಚನ ಶಿಲಾಮಂಟಪದ ಚನ್ನಬಸವ ಸ್ವಾಮೀಜಿ ಹೇಳಿದರು.

ಇಲ್ಲಿನ ಖಾಸ್ಗತೇಶ್ವರ ಮಠದಲ್ಲಿ ಸಾಧನಾ ಮಹಿಳಾ ಒಕ್ಕೂಟದಿಂದ ಖಾಸ್ಗತೇಶ್ವರ ದೀಪೋತ್ಸವದ ಅಂಗವಾಗಿ ಜರುಗಿದ ಚನ್ನಬಸವಣ್ಣನವರ ವಿರಚಿತ ಕರಣ ಹಸಿಗೆ ಪ್ರವಚನ, ಖಾಸ್ಗತೇಶ್ವರ ದೀಪೋತ್ಸವ ಹಾಗೂ ಕಾರ್ತಿಕ ಕಿರಣ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಾನವ ಶರೀರ ಮಾಂಸಮಯವಲ್ಲ ಬದಲಾಗಿ ಮಂತ್ರಮಯವಾಗಿದೆ. ಇಷ್ಠಲಿಂಗ ಚರಲಿಂಗವಾಗಿದ್ದು ಇದನ್ನು ಯಾವುದೇ ಸ್ಥಳದಲ್ಲಿ ಪೂಜಿಸಬಹುದು. ಸ್ಥಾವರಲಿಂಗವಿಟ್ಟು ಪೂಜಿಸುವುದು, ದೇವರ ದರ್ಶನಕ್ಕೆ ಸರದಿಯಲ್ಲಿ ನಿಲ್ಲುವುದು ಸೂಕ್ತವಾದದ್ದಲ್ಲ. ತಾಯಿಯ ಗರ್ಭದೊಳಗಿನ ಕೂಸಿಗೆ ನಾಭಿ ಮೂಲಕ ಊಟ ಸಿಕ್ಕು ಅದು ಬದುಕುತ್ತದೆ.

72,ಸಾವಿರ ಮಂತ್ರಗಳಲ್ಲಿ ಷಡಕ್ಷರ ಮಂತ್ರ ಓಂ ನಮಃ ಶಿವಾಯ ಶ್ರೇಷ್ಠವಾದದ್ದಾಗಿದೆ. ಅಂತೆಯೇ ಕರಣ ಹಸಿಗೆ ಶ್ರೇಷ್ಠ ಪ್ರವಚನವಾಗಿದ್ದು, ಧರ್ಮಗ್ರಂಥ ಎನ್ನಿಸಿಕೊಂಡಿದೆ. ಕಷ್ಟಗಳಿಲ್ಲದೆ ಪೂಜಿಸಲು ಇಷ್ಠಲಿಂಗ ಮಂತ್ರವೇ ಶ್ರೇಷ್ಠ ಎಂದರು.

ಸಾನ್ನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚೆನ್ನವೀರ ದೇವರು ಮಾತನಾಡಿ, ಶರಣ ಚನ್ನಬಸವಣ್ಣ ತುಂಬಾ ಜ್ಞಾನಿ, ಅಧ್ಯಯನಶೀಲರಾಗಿದ್ದರು. ಅವರ ಕರಣ ಹಸಿಗೆಯು ಅಧ್ಯಯನದಿಂದ ಹೊರಬಂದದ್ದಾಗಿದೆ.

ಅರಿವು ಇದ್ದಲ್ಲಿ ನಾವೆಲ್ಲ ಇರಬೇಕು. ಸಾಧನಾ ಒಕ್ಕೂಟ ಮಹಿಳಾ ಸಂಘಟನಾ ಶಕ್ತಿಗೆ ಕನ್ನಡಿಯಾಗಿದೆ. ಇಲ್ಲಿ ಹೆಣ್ಣುಮಕ್ಕಳೇ ಎಲ್ಲವನ್ನೂ ನಡೆಸುತ್ತಾರೆ. ಹೆಣ್ಣುಮಕ್ಕಳಿಂದಲೇ ಸಂಸ್ಕೃತಿ, ಧರ್ಮ ಉಳಿದಿದೆ. ಪ್ರತಿಯೊಬ್ಬರೂ ತಮ್ಮ ಧರ್ಮ ಅಚರಿಸುವ ಹಕ್ಕಿದೆ.

ಅದನ್ನು ಅಚರಿಸು, ಇದನ್ನು ಆಚರಿಸು ಎನ್ನುವುದು ತಪ್ಪು. ಚಂದ್ರಯಾನ ಸಂದರ್ಭದಲ್ಲಿ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದು ಭಕ್ತಿಯ ಶ್ರೇಷ್ಠತೆ ಎಂದರು.

ಇಟಗಿ ಭೂಕೈಲಾಸ ಮೇಲುಗದ್ದುಗೆ ಮಠದ ಡಾ. ಗುರುಶಾಂತವೀರ ಶಿವಾಚಾರ್ಯರು, ಬಸವನಬಾಗೇವಾಡಿ ವಿರಕ್ತ ಮಠದ ಸಿದ್ಧಲಿಂಗ ಶ್ರೀ, ಖಾಸ್ಗತೇಶ್ವರ ಮಠದ ಸಂಗಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕುಂಟೋಜಿ ಯಶಸ್ವಿನಿ ಸಾಮಾಜಿಕ ಮಹಿಳಾ ಸೇವಾ ಸಂಘದ ಸಿದ್ದಮ್ಮ ಒಣರೊಟ್ಟಿ, ಅಕ್ಕನ ಬಳಗದ ಗೌರವಾಧ್ಯಕ್ಷೆ ಗೌರಮ್ಮ ನಿಡಗುಂದಿಮಠ, ಸಾಧನಾ ಮಹಿಳಾ ಒಕ್ಕೂಟದ ಬೋರಮ್ಮ ರಾಂಪೂರ ಇತರರಿದ್ದರು.

ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಜ್ಯೋತಿ ಹಾಲ್ಯಾಳ ಸ್ವಾಗತಿಸಿದರು. ಶಾರದಾ ಕಂಬಳಿ, ಗುರುದೇವಿ ಹಾಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಹಳ್ಳೂರ ವಂದಿಸಿದರು.

ಶರಣೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಒಕ್ಕೂಟ, ಅಕ್ಕನ ಬಳಗದ ಸದಸ್ಯೆಯರು ಮಹಿಷಾಸುರ ಮರ್ದನ ದೇವಿ ತಾಂಡವ ನೃತ್ಯ, ಬಸವ ನೃತ್ಯ, ಬಸವ ಬೆಳಕು ರೂಪಕ, ಅಕ್ಕಮಹಾದೇವಿ ವಚನ ಗಾಯನಗಳು ಜರುಗಿದವು.


ಗಿರಿಜಾ ಕಡಿಯವರು 25 ವರ್ಷಗಳಿಂದ ಮಹಿಳಾ ದೌರ್ಜನ್ಯದ ವಿರುದ್ಧ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಮಹಿಳಾ ಸಂಘ ಪ್ರತಿ ವರ್ಷ ಪ್ರವಚನಗಳನ್ನು ಏರ್ಪಡಿಸುತ್ತಾ, ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ ಪಡೆದಿದೆ ಎಂದು ಸಾಧನಾ ಮಹಿಳಾ ಒಕ್ಕೂಟದ ಸದಸ್ಯೆ ಶಾರದಾ ಕಂಬಳಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net