ಹೊರಗುತ್ತಿಗೆ ಶಿಕ್ಷಕರ ಕಾಯಂಗೆ ಆಗ್ರಹ

raised-fist-icon-hand-protest-strike-fight-vector-7513463
Published on

ಬುಡಕಟ್ಟು ಸಮುದಾಯಗಳಲ್ಲಿ ಪಿಯು, ಡಿಇಡಿ, ಬಿ.ಎ., ಬಿ.ಎಡ್ ತರಬೇತಿ ಪಡೆದ ಮಹರ್ಷಿ ವಾಲ್ಮೀಕಿ ಮತ್ತು ಆದಿವಾಸಿ ಸರ್ಕಾರಿ ಆಶ್ರಮ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಸರ್ಕಾರ ಕಾಯಂಗೊಳಿಸಬೇಕು ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶೈಲೇಂದ್ರಕುಮಾರ್ ಆಗ್ರಹಿಸಿದರು.

1952ರಿಂದಲೂ ಸಮಾಜ ಕಲ್ಯಾಣ ಇಲಾಖೆಯವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶನದ ಮೇರೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಶಿಕ್ಷಕರನ್ನು ಸರ್ಕಾರ ಕಾಯಂ ನೇಮಕ ಮಾಡಿಕೊಳ್ಳದೆ ಶೈಕ್ಷಣಿಕ ಕಾರ್ಯಕ್ರಮ ಸಂಯೋಜನೆ ಮಾಡಿಲ್ಲ. ಸಂಘಟನೆಗಳ ಹೋರಾಟದ ಫಲವಾಗಿ 2005ರಿಂದ ಹೊರ ಗುತ್ತಿಗೆ ಆಧಾರದ ಮೇಲೆ ಈಗಾಗಲೇ ತಿಳಿಸಿದ ತರಬೇತಿ ಹೊಂದಿದವರನ್ನು ಏಜೆನ್ಸಿ ಮೂಲಕ ನಿಯೋಜಿಸಲಾಗುತ್ತಿದೆ. ಇದರಲ್ಲಿ ವಿಶೇಷವಾಗಿ ಅರಣ್ಯ ಆಧಾರಿತ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಕೊರಗ, ಸೋಲಿಗ, ಯರವ, ಮಲೆ ಕುಡಿಯ, ಬೆಟ್ಟ ಕುರುಬರು ಸೇರಿದ್ದಾರೆ. ಇವರಿಗೆ ಗೌರವಧನ ನೀಡಿ ಸೇವೆ ಪಡೆಯಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ, ಶಿಕ್ಷಣ ಇಲಾಖೆ ಇವರಿಗೆ ವಿಶೇಷ ಪ್ರಾತಿನಿಧ್ಯ ನೀಡಿರುವ ಉದಾಹರಣೆ ಇದೆ. ಹೀಗಾಗಿ ಆಶ್ರಮ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಸೇವೆ ಕಾಯಂಗೊಳಿಸಬೇಕು. ಇಲ್ಲದಿದ್ದರೆ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳ ಈ ಶಿಕ್ಷಕರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸಿದ್ದರಾಜು, ದಾಸಪ್ಪ, ಜಯರಾಜು, ಪ್ರಮೀಳಾ ಹಾಗೂ ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net