ಹೈಪವರ್ ಲೈನ್ ಕಂಬ ಏರಿ ಪ್ರತಿಭಟನೆ

11 TKE 1(1) VISHU
ಸೂಕ್ತ ಪರಿಹಾರಕ್ಕಾಗಿ ವಿದ್ಯುತ್ ಕಂಬ ಏರಿ ಪ್ರತಿಭಟನೆ ನಡೆಸಿದ ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್.
Published on

ತರೀಕೆರೆ: ಶ್ರೀಗಂಧ ಬೆಳೆದ ಭೂಮಿಗೆ ತಕ್ಕ ಪರಿಹಾರ ನೀಡಲು ಸತಾಯಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆ ಖಂಡಿಸಿ ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಮಂಗಳವಾರ ಪಟ್ಟಣ ಸಮೀಪದ ಜಮೀನಿನಲ್ಲಿರುವ ಹೈಪವರ್ ಲೈನ್ ಕಂಬ ಏರಿ ಪ್ರತಿಭಟನೆ ನಡೆಸಿದರು.

22 ಬೆಳೆಗಾರರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಕಳೆದ 9 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ತಲೆಕೆಡಿಸಿಕೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೈತ ವಿರೋಧಿ ನಡೆಯಿಂದ ಬೇಸತ್ತ ಟಿ.ಎನ್.ವಿಶುಕುಮಾರ್ ಶಿವಮೊಗ್ಗದಿಂದ ಬೆಂಗಳೂರಿಗೆ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ಜಮೀನಿನಲ್ಲಿ ಅಳವಡಿಸಿರುವ 220 ಕೆ.ವಿ. ಸಾಮರ್ಥ್ಯದ ಹೈಪವರ್ ವಿದ್ಯುತ್ ಕಂಬ ಏರಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ಎಸಿ ಡಾ. ಕೆ.ಜೆ.ಕಾಂತರಾಜ್, ಡಿವೈಎಸ್ಪಿ ಡಾ. ಆರ್.ಹಾಲಮೂರ್ತಿ ರಾವ್, ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ, ವಿವಿಧ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಕಂಬ ಏರಿದ್ದ ಟಿ.ಎನ್.ವಿಶುಕುಮಾರ್ ಮನವೊಲಿಸಿ ಕೆಳಗಿಳಿಸುವ ಪ್ರಯತ್ನ ಮಾಡಿದರು. ಪಟ್ಟು ಬಿಡದ ಟಿ.ಎನ್.ವಿಶುಕುಮಾರ್, ಪೊಳ್ಳು ಭರವಸೆಗೆ ಬಗ್ಗುವುದಿಲ್ಲ. ಹತ್ತಿರ ಬಂದರೆ ದಾರದ ಮೂಲಕ ಕೊರಳಿನಲ್ಲಿ ಸಿಲುಕಿಸಿಕೊಂಡಿರುವ ಪೆಟ್ರೋಲ್ ಬಾಟಲಿ ಮುಚ್ಚಳ ತೆರೆದು ಮೈಮೇಲೆ ಸುರಿದುಕೊಳ್ಳುವುದಲ್ಲದೆ, ಬೆಂಕಿ ಹಚ್ಚಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಾಬರಿಯಾದ ಅಧಿಕಾರಿಗಳು ವಿದ್ಯುತ್ ಕಂಬ ಏರಿದ್ದ ಟಿ.ಎನ್.ವಿಶುಕುಮಾರ್ ಜತೆ ಮಾತನಾಡಿ, ಸಮಾಧಾನಕ್ಕಾಗಿ ಪೊಳ್ಳು ಭರವಸೆ ನೀಡುವ ಪ್ರಶ್ನೆ ಇಲ್ಲ. ನ್ಯಾಯಯುತ ಪರಿಹಾರ ಸಂಬಂಧ ಚರ್ಚಿಸಲು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ಏರ್ಪಡಿಸಲಾಗುವುದು. ಸಭೆಯಲ್ಲಿ ಶ್ರೀಗಂಧ ಬೆಳೆದ ಭೂಮಿಗೆ ತಕ್ಕ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು. ಯಾವುದೇ ಅವಘಡಕ್ಕೆ ಅವಕಾಶ ಮಾಡಿಕೊಡದಂತೆ ಕಂಬದಿಂದ ಕೆಳಗಿಳಿದು ಬನ್ನಿ ಎಂದು ಅಧಿಕಾರಿಗಳು ಪರಿಪರಿಯಾಗಿ ಬೇಡಿಕೊಂಡ ಬಳಿಕ ಟಿ.ಎನ್.ವಿಶುಕುಮಾರ್ ವಿದ್ಯುತ್ ಕಂಬದಿಂದ ಇಳಿದುಬಂದು ಮುಷ್ಕರ ಮೊಟಕುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net