ಹೈನುಗಾರಿಕೆ ರೈತರ ಸ್ವಾವಲಂಬನೆ ಬದುಕಿಗೆ ಆಧಾರ

9kdr2 ananad
ಕಡೂರು ತಾಲೂಕಿನ ಮತಿಘಟ್ಟ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಗೋವು ಪೂಜೆ ನೆರವೇರಿಸುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಜೆ.ಸವಿತಾ, ಶ್ರೀಕಂಠ ಒಡೆಯರ್, ಡಾ.ಉಮೇಶ್, ಚಂದ್ರಪ್ಪ, ಲಕ್ಕೇನಹಳ್ಳಿ ಕೃಷ್ಣಮೂರ್ತಿ ಮತ್ತಿತರರಿದ್ದರು.
Published on

ಕಡೂರು: ಬಹಳಷ್ಟು ಗ್ರಾಮಗಳಲ್ಲಿ ತೆಂಗು ನಾಶವಾದ ಬಳಿಕ ಹೈನುಗಾರಿಕೆ ಜೀವನವೇ ರೈತರ ಸ್ವಾವಲಂಬನೆ ಬದುಕಿಗೆ ಆಧಾರವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲೂಕು ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಆರ್‌ಐಡಿಎ್-30ರ ಯೋಜನೆಯಲ್ಲಿ 49.98 ಲಕ್ಷ ರೂ. ವೆಚ್ಚದ ನೂತನ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನಲ್ಲಿ ಪಶು ಸಂಗೋಪನೆ ಅವಲಂಬಿಸಿದ ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯ ನಿರ್ಮಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮತಿಘಟ್ಟ ವ್ಯಾಪ್ತಿಯ ಕೆರೆಸಂತೆ, ಚೀರನಹಳ್ಳಿ, ಮತಿಘಟ್ಟ ಮೂರು ಗ್ರಾಪಂಗಳ ವ್ಯಾಪ್ತಿಯ ಜಾನುವಾರುಗಳಿಗೆ ಮತಿಘಟ್ಟ ಪಶು ಚಿಕಿತ್ಸಾಲಯವೇ ಬಹುದೊಡ್ಡ ಆಸರೆಯಾಗಿತ್ತು. ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಈ ಹಿಂದೆ ಇದ್ದ ಪಶು ಆಸ್ಪತ್ರೆಯು ಹೆದ್ದಾರಿ ನಿರ್ಮಾಣಕ್ಕಾಗಿ ನೆಲಸಮವಾಗಿತ್ತು. ಮೂರು ವರ್ಷಗಳಿಂದ ಆಸ್ಪತ್ರೆಗೆ ಸ್ವಂತ ಕಟ್ಟಡವಿಲ್ಲದೆ ರೈತಾಪಿ ಜನರು ಜಾನುವಾರುಗಳ ಆರೋಗ್ಯ ಕಾಪಾಡುವುದು ದೊಡ್ಡ ಸವಾಲಾಗಿತ್ತು. ರೈತರ ಆದ್ಯತೆ ಮೇರೆಗೆೆ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಗ್ರಾಮೀಣ ಪ್ರದೆೇಶ ಅಭಿವೃದ್ಧಿ ಮೂಲ ಸೌಕರ್ಯ ನಿಧಿಯಿಂದ ಅನುದಾನ ಮತ್ತು ಕಟ್ಟಡಕ್ಕೆ ಜಾಗ ಗುರುತಿಸಿಕೊಡಲಾಗಿದೆ. ವೈದ್ಯರು ಜಾನುವಾರುಗಳ ಆರೋಗ್ಯ ಕಾಪಾಡಲು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದರು.

ಗ್ರಾಮದಲ್ಲಿ ಆರೋಗ್ಯ ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಿ ಬಗೆಹರಿಸಲಾಗುವುದು. ಈಗ ನಡೆಯುತ್ತಿರುವ 60 ಮಕ್ಕಳ ಹಾಸ್ಟೆಲ್ ಸಾಮರ್ಥ್ಯವನ್ನು 125ಕ್ಕೆ ಏರಿಸಲಾಗುವುದು. ಅಲ್ಲದೆ ನಿರ್ಮಾಣದ ಪ್ರಗತಿಯಲ್ಲಿರುವ ಗ್ರಾಮದ ರೇವಣಸಿದ್ದೇಶ್ವರ ಸಮುದಾಯ ಭವನ ಮೂರ‌್ನಾಲ್ಕು ತಿಂಗಳೊಳಗಾಗಿ ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಯು ಸ್ವಂತ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದರೂ ಕಾಮಗಾರಿ ಇಂದಿಗೂ ಆರಂಭಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿ ಆರಂಭಿಸಲು ಪಿಡಿಒ ಅವರಿಗೆ ತಾಕೀತು ಮಾಡಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಬಿ.ಉಮೇಶ್ ಮಾತನಾಡಿ, ಇಲ್ಲಿ ಶಾಸಕರ ನಿರ್ದೇಶನದಂತೆ ತಾಲೂಕು ವ್ಯಾಪ್ತಿಯ ಗಡಿ ಗ್ರಾಮಗಳಿಂದ ಆರಂಭಿಸಿ ಜಾನುವಾರುಗಳಿಗೆ ಚರ್ಮಗಂಟು ರೋಗ ಮತ್ತು ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೆ.ಸವಿತಾ, ಸದಸ್ಯರಾದ ವಿನೋದಮ್ಮ, ಶ್ರೀಕಂಠ ಒಡೆಯರ್, ಮಹೇಂದ್ರಾಚಾರ್, ಚಂದ್ರಪ್ಪ, ದಿನೇಶ್, ಸಂತೋಷ್‌ಕುಮಾರ್, ತಾಪಂ ಮಾಜಿ ಸದಸ್ಯ ದಾಸಯ್ಯನಗುತ್ತಿ ಚಂದ್ರಪ್ಪ, ಪಶು ಸಂಗೋಪನಾ ಇಲಾಖೆಯ ವೈದ್ಯರಾದ ಡಾ. ಯೋಗೀಶ್, ಡಾ. ಕೃಷ್ಣ, ಡಾ. ಕಿರಣ್, ಚೇತನ್, ಬೀರೂರು ಪುರಸಭೆ ಸದಸ್ಯ ಬಿ.ಕೆ. ಶಶಿಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net