

ಹನಗೋಡು: ಹೈನುಗಾರರಿಗೆ ಸರ್ಕಾರದ ಸವಲತ್ತು ತಲುಪಿಸುವಲ್ಲಿ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.
ಹನಗೋಡು ಹೋಬಳಿಯ ತಟ್ಟೆಕೆರೆ ಗ್ರಾಮದಲ್ಲಿ ಭಾನುವಾರ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜಾನುವಾರಗಳಿಗೆ ಯಾವುದೇ ರೀತಿಯ ಲಸಿಕೆ ಕೊರತೆಯಾಗದಂತೆ ಆಗದಂತೆ ಹುಣಸೂರು ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದೆ ಎಂದರು.
ಈಗಾಗಲೇ ಕಾಲುಬಾಯಿ ಜ್ವರ ಹಾಗೂ ಚರ್ಮಗಂಟು ರೋಗಗಳಿಗೆ ತಾಲೂಕಿನ ಜಾನುವಾರುಗಳಿಗೆ ಶೇ.90 ರಷ್ಟು ಲಸಿಕೆ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಹೈನುಗಾರರಿಗೆ ಸರ್ಕಾರದ ಸವಲತ್ತುಗಳು ಸೂಕ್ತ ಸಮಯಕ್ಕೆ ತಲುಪಲು ಅಧಿಕಾರಿಗಳೊಂದಿಗೆ ಜನಪ್ರತಿನಿಗಳೂ ಕೈಜೋಡಿಬೇಕು. ಜಾನುವಾರುಗಳ ಸೇವೆಯನ್ನು ಪ್ರಧಾನವಾಗಿ ಪರಿಗಣಿಸಬೇಕು ಎಂದವರು ಹೇಳಿದರು.
ತಟ್ಟೆಕೆರೆ ಗ್ರಾಮದ ಈಶ್ವರ ದೇಗುಲ ಮುಂಭಾಗದಲ್ಲಿರುವ ಆರಳಿಮರಕ್ಕೆ ಅಶ್ವತ್ಥ ಕಟ್ಟೆಯನ್ನು ತಮ್ಮ ತಾಯಿ ಹೆಸರಿನಲ್ಲಿ ನಿರ್ಮಿಸಿಕೊಡುವೆ. ಗರಡಿ ಮನೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿಕೊಡುವೆ ಎಂದು ಅವರು ಭರವಸೆ ನೀಡಿದರು. ಸ್ಥಳೀಯ ಡೇರಿ ಅಧ್ಯಕ್ಷ ಚಂದ್ರಹಾಸ, ಮುಖಂಡರಾದ ನಾರಾಯಣ, ಪ್ರಸನ್ನಕುಮಾರ್, ವೀರಭದ್ರೇಗೌಡ, ಹರೀಶ್, ದಿನೇಶ್ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ, ಪಶುವೈದ್ಯರಾದ ಡಾ. ದರ್ಶನ್, ಡಾ.ನಾಗರಾಜ್ ಇತರರು ಹಾಜರಿದ್ದರು.