

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿವೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕೋರಿ ವಕೀಲ ಟಿ. ಶ್ರೀರಾಮ್ ನಾಯ್ಕ ಮತ್ತಿತರರು ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಮುನ್ನೆಲೆಗೆ ಬಂದ ಪ್ರಕರಣವು ಆತಂಕಕಾರಿ ಬೆಳವಣೆಗೆಯಾಗಿದೆ. ಈ ವಿಚಾರವಾಗಿ ಜೂ.3ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಾಗಿ 17 ದಿನಗಳು ಕಳೆದಿದೆ. ಇದುವರೆಗೂ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿಲ್ಲ ಎನ್ನುವುದು ಆಘಾತಕಾರಿ ಸಂಗತಿ ಎಂದು ಪತ್ರದಲ್ಲಿ ವಕೀಲರು ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೆ, ಪ್ರಕರಣ ಅತ್ಯಂತ ಗಂಭೀರ ಸ್ವರೂಪದಾಗಿದ್ದು, ಸೂಕ್ತ ರೀತಿಯಲ್ಲಿ ತನಿಖೆ ಅಗತ್ಯವಿದೆ. ಆರೋಪಿಗಳು ಸಾಕ್ಷ್ಯನಾಶಕ್ಕೆ ಮುಂದಾಗಬಹುದಾದ ಸಾಧ್ಯತೆ ಹೆಚ್ಚಿದೆ. ದೂರುದಾರನ ಹೇಳಿಕೆ ಅನುಸಾರ ಇದರಲ್ಲಿ ಪ್ರಭಾವಿಗಳು ಪಾಲುದಾರಾಗಿದ್ದಾರೆ. ಈ ಹಿನ್ನೆಲೆ ಪ್ರಕರಣ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ನ್ಯಾಯಾಲಯ ತಕ್ಷಣ ಹಸ್ತಕ್ಷೇಪ ಮಾಡಬೇಕಾದ ಅವಶ್ಯಕತೆ ಇದೆ.ಈ ಎಲ್ಲ ಅಂಶ ಪರಿಗಣಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತ್ವರಿತಗತಿಯಲ್ಲಿ ತನಿಖೆಗೆ ಮಾಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.