ಹೆಸರು ನೋಂದಾಯಿಸಿ ಚಿಕಿತ್ಸೆ ಪಡೆಯಿರಿ: ಆರೋಗ್ಯ ಮೇಳದ ಪೂರ್ವ ಸಿದ್ಧತಾ ಸಭೆಯಲ್ಲಿ ಡಿಸಿ ಲತಾ ಮನವಿ

27CBP3a
Published on

ಚಿಕ್ಕಬಳ್ಳಾಪುರ: ಎಸ್‌ಜೆಸಿಐಟಿ ಕಾಲೇಜು ಆವರಣದಲ್ಲಿ ಮೇ.14 ಮತ್ತು 15ರಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಚಿತ ಬೃಹತ್ ಆರೋಗ್ಯ ಮೇಳ ಹಮ್ಮಿಕೊಳ್ಳಲು ಜಿಲ್ಲಾಡಳಿತ ಸಿದ್ಧತೆ ಕೈಗೊಳ್ಳುತ್ತಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ಉಚಿತ ಬೃಹತ್ ಆರೋಗ್ಯ ಮೇಳದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಆರ್.ಲತಾ, ಇಲಾಖಾವಾರು ಜವಾಬ್ದಾರಿ ಹಂಚಿ ಮಾಡಿ ಮಾತನಾಡಿ, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ಬೃಹತ್ ಆರೋಗ್ಯ ಮೇಳವು ಎರಡು ದಿನ ನಡೆಯಲಿದ್ದು, ಹೃದಯ ಸಂಬಂಧಿ ಸೇರಿ ಎಲ್ಲ ರೀತಿಯ ಕಾಯಿಲೆಗಳಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆರೋಗ್ಯ ಸೇವೆ ಮತ್ತು ಔಷಧ ಪೂರೈಸಲಾಗುತ್ತದೆ. ಇದಕ್ಕೆ ಜನರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಪಿಡಿಒ ಮತ್ತು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷರು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಮಾಡಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವವರ ಮಾಹಿತಿ ಸಂಗ್ರಹಿಸಬೇಕು. ಆನ್‌ಲೈನ್ ಮೂಲಕ ನೋಂದಾಯಿಸಬೇಕು. ಅದೇ ರೀತಿ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ನೋಂದಣಿ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ ಎಂದರು.

ಆರೋಗ್ಯ ಸೇವೆ ಪಡೆಯಲು ಮೇಳದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ನೋಂದಾಯಿಸಿಕೊಳ್ಳುವ ಗುರಿ ಹೊಂದಲಾಗಿದೆ. ಇನ್ನು ಪ್ರತಿ ಗ್ರಾಪಂ ಕೇಂದ್ರದಿಂದ ಎಸ್‌ಜೆಸಿಐಟಿ ಕಾಲೇಜಿನವರೆಗೂ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಸರು ನೋಂದಣಿ ಹಾಗೂ ಕಾರ್ಡ್ ವಿತರಣೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ತಪಾಸಣೆ, ಎಕೋ ಟೆಸ್ಟ್, ಆಂಜಿಯೋಗ್ರಾಮ್ ಚಿಕಿತ್ಸೆ, ಮೂಳೆ, ದಂತ, ಕಿವಿ ಮತ್ತು ಗಂಟಲು, ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ, ಬಾಯಿಯ ಕ್ಯಾನ್ಸರ್ ತಪಾಸಣೆ, ಎಲ್ಲ ರೀತಿಯ ರಕ್ತದ ಪರೀಕ್ಷೆ ಸೇರಿ ಹಲವು ಸೇವೆ ಲಭ್ಯವಿರಲಿದೆ. ಇದನ್ನು ಜನರು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಪೌರಾಯುಕ್ತ ಮಹಾಂತೇಶ್ ಮತ್ತಿತರರು ಇದ್ದರು.

150 ತಪಾಸಣೆ ಕೇಂದ್ರ:ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಸಾವಿರಕ್ಕೂ ಹೆಚ್ಚು ತಜ್ಞ ವೈದ್ಯರು ಮತ್ತು ಸಿಬ್ಬಂದಿ ಮೇಳದಲ್ಲಿ ಭಾಗವಹಿಸಲಿದ್ದಾರೆ. 150ಕ್ಕೂ ಹೆಚ್ಚು ತಪಾಸಣಾ ಕೌಂಟರ್‌ಗಳನ್ನು ತೆರೆಯಲು ಜಿಲ್ಲಾಡಳಿತ ಯೋಜಿಸಿದೆ.

ಆರೋಗ್ಯ ಮೇಳಕ್ಕೆ ನೋಂದಣಿ, ವಾಹನ, ಸ್ವಾಗತ, ವೇದಿಕೆ, ಪ್ರಚಾರ, ಔಷಧ ಹಾಗೂ ಜಿಲ್ಲಾ ನೋಡಲ್ ಸಮಿತಿಗಳನ್ನು ರಚಿಸಲಿದ್ದು, ಶೌಚಗೃಹ, ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಸೇರಿ ನಾನಾ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net