ಹೆಳವರಹುಂಡಿ ಗ್ರಾಮಸ್ಥರಂದ ಕ್ಷೀರಾಭಿಷೇಕ

20tnpnewsfile01 (4)
Published on

ತಿ.ನರಸೀಪುರ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಹೆಳವರಹುಂಡಿ ಗ್ರಾಮಸ್ಥರು ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.


ತಾಲೂಕು ಕುರುಬ ಸಂಘದ ನಿರ್ದೇಶಕ ಎಂ.ಕೆ.ಸಹದೇವ್ ನೇತೃತ್ವದಲ್ಲಿ ಸಮೀಪದ ಹೆಳವರಹುಂಡಿ ಗ್ರಾಮದ ವೃತ್ತದಲ್ಲಿ ಜಮಾವಣೆಗೊಂಡ ಗ್ರಾಮಸ್ಥರು, ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ಈ ವೇಳೆ ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದರು. ಇದೇ ವೇಳೆ ಪಟಾಕಿ ಸಿಡಿಸಿದರಲ್ಲದೆ ಅನ್ನ ಸಂತರ್ಪಣೆ ಮಾಡಿದರು.


ಈ ವೇಳೆ ಮಾತನಾಡಿದ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಿಶೋರ್, ಹಿಂದುಳಿದ ವರ್ಗದ ಹರಿಕಾರ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯದ ಜನತೆಯ ಆಶಯಕ್ಕೆ ಪೂರಕವಾಗಿ ಅಧಿಕಾರ ನಡೆಸಲಿದ್ದಾರೆ. ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಮೂಲಕ ರಾಜ್ಯವನ್ನು ಕಲ್ಯಾಣ ಕರ್ನಾಟಕ ಮಾಡಲಿದ್ದಾರೆ ಎಂದರು.


ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನಡೆಸಿದ ಅನುಭವವಿದೆ. ಈ ಬಾರಿಯೂ ಸಹ ರಾಜ್ಯದ ಜನತೆಗೆ ಅನೇಕ ಭಾಗ್ಯಗಳನ್ನು ನೀಡುವ ಜತೆಗೆ 5 ವರ್ಷಗಳ ಆಡಳಿತ ಪೂರೈಸಲಿ ಎಂದು ಆಶಿಸಿದರು.


ತಾಲೂಕು ಕುರುಬ ಸಂಘದ ನಿರ್ದೇಶಕ ಎಂ.ಕೆ.ಸಹದೇವ್ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯ ಕಂಡ ಅತ್ಯುತ್ತಮ ಸಂಸದೀಯ ಪಟುವಾಗಿದ್ದು, ಕ್ಷೇತ್ರದ ಜನತೆ ಅವರಿಗೆ ಈ ಬಾರಿ ಹೆಚ್ಚಿನ ಮತ ನೀಡುವ ಮೂಲಕ ಅವರು ಮುಖ್ಯಮಂತ್ರಿ ಆಗುವ ಸದಾವಕಾಶ ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಸರ್ಕಾರವಾಗಿದ್ದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರ ಆಡಳಿತ ನೀಡುವ ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಜನರಿಗೆ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಭರವಸೆ ನೀಡುವ ಮೂಲಕ ತಮ್ಮ ಮಾತಿಗೆ ಬದ್ದರಾಗಿ ನಡೆದು ಕೊಂಡಿದ್ದಾರೆ. ಇಂತಹ ಉತ್ತಮ ರಾಜಕಾರಣಿಯ ಸೇವೆ ಕೇವಲ ರಾಜ್ಯಕ್ಕಷ್ಟೇ ಸೀಮಿತವಾಗಬಾರದು ಮುಂದೆ ಅವರು ಕೇಂದ್ರ ಸರ್ಕಾರದದಲ್ಲಿ ಉನ್ನತ ಸ್ಥಾನ ಗಳಿಸಿ ದೇಶದ ಜನತೆಯ ಸೇವೆ ಮಾಡುವಂತಾಗಬೇಕು ಎಂದರು.

ಸೇವಾಶ್ರಯ ಫೌಂಡೇಶನ್ ಉಪಾಧ್ಯಕ್ಷ ಕ್ರೇಜಿ ಸುರೇಶ್ ಮಾತನಾಡಿದರು. ವರುಣ ಯುವ ಕಾಂಗ್ರೆಸ್ ಅಧ್ಯಕ್ಷ ಅಮಾಸ್ಯೆಗೌಡ, ಮುಖಂಡರಾದ ಪುಟ್ಟಸ್ವಾಮಿ, ಕೆ.ಗಣೇಶ್, ಬಸವಣ್ಣ, ರಮೇಶ್, ನಾಗರಾಜು, ಸಿದ್ದರಾಜು, ರೇವಣ್ಣ, ಚಿಕ್ಕಗಂಡು, ರಾಮ, ಗೋವಿಂದ, ರಾಯಣ್ಣ, ಮನು ಸೇರಿದಂತೆ ಯುವ ಗರ್ಜನೆ ಯುವಕ ಮಿತ್ರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net