ಹೆಲ್ಪ್‌ಡೆಸ್ಕ್‌ನಿಂದ ತಾಂತ್ರಿಕ ಸಮಸ್ಯೆ ಪರಿಹಾರ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾಹಿತಿ, ಗಣಕೀಕರಣ ವ್ಯವಸ್ಥೆ ಸಫಲ

28-klr-1 dcc bank
Published on

ಕೋಲಾರ: ದೇಶದಲ್ಲಿ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣೀಕರಣ ವ್ಯವಸ್ಥೆ ಜಾರಿಗೆ ಬರಬೇಕೆಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಈ ಯೋಜನೆಯನ್ನು ಮೊದಲು ಜಾರಿಗೆ ತರುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿವಾಹಣಾಧಿಕಾರಿಗಳು ಮತ್ತು ಕಂಪ್ಯೂಟರ್ ಆಪರೇಟರ್‌ಗಳಿಗೆ ಗಣಕೀಕರಣ, ಲೆಕ್ಕಪತ್ರಗಳ ನಿರ್ವಹಣೆ ತಂತ್ರಾಂಶದ ಕುರಿತು ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಡಿಸಿಸಿ ಬ್ಯಾಂಕ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ 194 ಸಹಕಾರ ಸಂಘಗಳ ಗಣಕೀಕರಣ ನಡೆಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಒಂದು ವೇಳೆ ತಂತ್ರಾಂಶ ಬಳಕೆಗೆ ಏನಾದರೂ ಸಮಸ್ಯೆಯಿದ್ದಲ್ಲಿ ಬ್ಯಾಂಕಿನಿಂದ ಅನುಷ್ಠಾನಕ್ಕೆ ತಂದಿರುವ ಹೆಲ್ಪ್ ಡೆಸ್ಕ್ ಸಹಾಯ ಪಡೆದು ಗಣಕೀಕರಣ ವ್ಯವಸ್ಥೆ ಸಫಲಗೊಳಿಸಬೇಕು ಎಂದು ಸೂಚಿಸಿದರು.

ಅವಿಭಜಿತ ಜಿಲ್ಲೆಯ 194 ಸಹಕಾರ ಸಂಘಗಳ ಪೈಕಿ ಕೇವಲ ಇನ್ನೂ 11 ಸಹಕಾರ ಸಂಘಗಳು ಗಣೀಕರಣ ಬಾಕಿ ಉಳಿಸಿಕೊಂಡಿವೆ. ಇದಕ್ಕೆ ಅಯಾ ಕಾರ್ಯದರ್ಶಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ. ಇದರಿಂದ ಬ್ಯಾಂಕ್ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಲಿದ್ದು, ಗಡುವು ಮುಗಿದ ಮೇಲೂ ಯೋಜನೆ ಜಾರಿಗೊಳ್ಳದಿದ್ದರೆ ಕಾರ್ಯದರ್ಶಿಗಳು ಮತ್ತು ಸಿಇಒಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಿಸಿಸಿ ಬ್ಯಾಂಕ್ ಸಾವಿರಾರು ಕೋಟಿ ರೂಗಳನ್ನು ಫ್ಯಾಕ್ಸ್‌ಗಳಿಗೆ ಸಾಲ ನೀಡಿ ಸುಮ್ಮನೆ ಕುಳಿತುಕೊಳ್ಳಲು ನನ್ನ ಆಡಳಿತದಲ್ಲಿ ಎಂದಿಗೂ ಸಾಧ್ಯವಿಲ್ಲ. ವಹಿವಾಟಿನಲ್ಲಿ ಲೋಪ ಕಂಡು ಬಂದರೆ ಸಹಿಸುವುದಿಲ್ಲ, ಸಹಕಾರ ಸಂಘಗಳ ಸಿಬ್ಬಂದಿ ಮೈಗಳ್ಳತನ ಬಿಟ್ಟು ಕ್ರಿಯಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಗೋವಿಂದರಾಜು, ವೆಂಕಟರೆಡ್ಡಿ, ನಾಗೀರೆಡ್ಡಿ, ಚನ್ನರಾಯಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಎಸ್.ವಿ. ಗೋವರ್ಧನರೆಡ್ಡಿ, ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಡಿ.ಆರ್. ರಾಮಚಂದ್ರೇಗೌಡ, ಪೆಮ್ಮಶೆಟ್ಟಹಳ್ಳಿ. ಎಸ್.ಸುರೇಶ್, ಮೂರಾಂಡಹಳ್ಳಿ ಇ. ಗೋಪಾಲಪ್ಪ, ಪಿ.ಎಂ. ವೆಂಕಟೇಶ್, ಟಿ.ಕೆ. ಬೈರೇಗೌಡ, ಅರುಣಾ, ಸಿಇಒ ಕೆ.ಎಂ. ಭಾರತಿ ಉಪಸ್ಥಿತರಿದ್ದರು.

ಸಹಕಾರ ಸಂಘಗಳಲ್ಲಿ ಏನೇ ಸಮಸ್ಯೆ ಉಂಟಾಗಿದ್ದರೂ ಅದನ್ನು ಸಂಬಂಧ ಪಟ್ಟವರ ಅಥವಾ ಪ್ರಭಾರ ಎಂ.ಡಿ. ಶಿವಕುಮಾರ್ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಂಡಾಗ ಮಾತ್ರ ವಹಿವಾಟು ಸಮರ್ಪಕವಾಗಿ ಮುಂದುವರಿಸಲು ಸಾಧ್ಯ. ನೀಲಕಂಠೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net