ಹೆರಿಗೆಯಾದ ಅರ್ಧ ತಾಸಿನೊಳಗೆ ಎದೆಹಾಲುಣಿಸಿ: ಡಾ.ಸಿದ್ದನಗೌಡ ಪಾಟೀಲ್ ಸಲಹೆ

1 smg 9
Published on

ಶಿವಮೊಗ್ಗ: ಹೆರಿಗೆಯಾದ ಅರ್ಧ ಗಂಟೆಯೊಳಗೆ ಮಗುವಿಗೆ ಹಾಲುಣಿಸುವುದರಿಂದ ಉತ್ತಮ ಪೋಷಕಾಂಶ ಲಭಿಸುವುದರ ಜತೆಗೆ ಅನೇಕ ಸೋಂಕುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್ ಹೇಳಿದರು.

ಮಿಳಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಮತ್ತು ವಿಶ್ವ ಸ್ತನ್ಯಪಾನ ವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆ(ಸಿಜೇರಿಯನ್) ಅಥವಾ ಸಹಜ ಹೆರಿಗೆಯಾದ ಅರ್ಧಗಂಟೆಯಲ್ಲೇ ತಾಯಿ ಹಾಲು ಕುಡಿಸುವುದರಿಂದ ನ್ಯುಮೋನಿಯಾ, ಶ್ವಾಸಕೋಶದ ತೊಂದರೆ, ವಾಂತಿ-ಭೇದಿ ಇತರೆ ಸೋಂಕುಗಳಿಂದ ಮಗು ರಕ್ಷಣೆ ಪಡೆಯುತ್ತದೆ ಎಂದರು.

ತಾಯಿಯ ಹಾಲು ಆರೋಗ್ಯಕರವಾಗಿದ್ದು, ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಿಸುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ತಾಯಂದಿರು ಸರಿಯಾದ ಭಂಗಿಯಲ್ಲಿ ಮಗುವಿಗೆ ಹಾಲು ಕುಡಿಸಬೇಕು. ಆರು ತಿಂಗಳವರೆಗೆ ಬೇರೆ ಪೂರಕ ಆಹಾರ ನೀಡದೆ ಸಂಪೂರ್ಣವಾಗಿ ತಾಯಿ ಹಾಲನ್ನೇ ನೀಡಬೇಕು ಎಂದು ಹೇಳಿದರು.

ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್ ಮಾತನಾಡಿ, ಅತಿಸಾರ ಭೇದಿಯನ್ನು ನಿಯಂತ್ರಿಸಲು ಒಆರ್‌ಎಸ್ ಮತ್ತ ಜಿಂಕ್ ಮಾತ್ರೆ ಬಳಸಬೇಕು. ಒಂದು ಲೀಟರ್ ನೀರಿಗೆ ಒಂದು ಪೊಟ್ಟಣ ಒಆರ್‌ಎಸ್ ಪುಡಿ ಹಾಕಿ ಮಿಶ್ರಣ ತಯಾರಿಸಿಕೊಂಡು ಚಮಚದಲ್ಲಿ ಆಗಾಗ್ಗೆ ಮಗುವಿಗೆ ಕುಡಿಸುತ್ತಿರಬೇಕು. ಇದರಿಂದ ನಿರ್ಜಲೀಕರಣ ಆಗುವುದಿಲ್ಲ. ಜತೆಗೆ 14 ದಿನಗಳವರೆಗೆ ಜಿಂಕ್ ಮಾತ್ರೆ ನೀಡಬೇಕೆಂದು ಸಲಹೆ ನೀಡಿದರು.

ಆರ್‌ಸಿಎಚ್‌ಒ ಡಾ.ನಾಗರಾಜ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಸೋಮವಾರದಿಂದ ಆ.15ರ ವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆಚರಿಸಲಾಗುತ್ತಿದೆ. ತಾಯಿ-ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸ್ತನ್ಯಪಾನ ಬಹಳ ಮುಖ್ಯವಾದುದು. ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಇಂದಿನಿಂದ ಒಂದು ವಾರ ಕಾಲ ವಿಶ್ವ ಸ್ತನ್ಯಪಾನ ವಾರಾಚರಣೆ ಮಾಡಲಾಗುತ್ತಿದೆ ಎಂದರು.

ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ ನಾಗ್ಲೀಕರ್ ಮಾತನಾಡಿದರು. ತಾಯಂದಿರಿಗೆ ಒಆರ್‌ಎಸ್ ಪೊಟ್ಟಣ ಮತ್ತು ಜಿಂಕ್ ಮಾತ್ರೆ ವಿತರಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಮಿಳಘಟ್ಟ ಪ್ರೌಢಶಾಲೆ ಮುಖ್ಯಶಿಕ್ಷಕ ಉಮಾಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net