ಹೆರಿಗೆ ಮಾಡಿಸುವ ವೇಳೆ ಮಗುವಿನ ಗುದದ್ವಾರಕ್ಕೆ ಗಾಯ

Published on

ದಾವಣಗೆರೆ :  ಹೆರಿಗೆ ಮಾಡಿಸುವ ವೇಳೆ ವೈದ್ಯರು ಹೊಟ್ಟೆಯಲ್ಲಿದ್ದ ಮಗುವಿನ ಗುದದ್ವಾರವನ್ನು ಕೊಯ್ದಿರುವುದಾಗಿ ಆರೋಪಿಸಿ ಪಾಲಕರು, ಸಂಬಂಧಿಕರು ಚಿಗಟೇರಿ ಜಿಲ್ಲಾಸ್ಪತ್ರೆಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.  ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಅವರ ಪತ್ನಿ ಅಮೃತಾ ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜೂನ್ 27 ರಂದು ಸಿಜೇರಿಯನ್ ಮಾಡಿ ಮಗುವನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ವೈದ್ಯರೊಬ್ಬರು ಮಗುವಿನ ಗುದದ್ವಾರವನ್ನು ಕೊಯ್ದಿದ್ದಾಗಿ ಆರೋಪ ಕೇಳಿಬಂದಿದೆ.  ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವನ್ನು ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು ಶುಕ್ರವಾರ ಮೃತಪಟ್ಟಿತು ಎಂದು ತಿಳಿದು ಬಂದಿದೆ.  ಮಗುವಿನ ಸಾವಿಗೆ ವೈದ್ಯರು ಕಾರಣ ಎಂದು ಆರೋಪಿಸಿ ಜಿಲ್ಲಾಸ್ಪತ್ರೆಯ ಮುಂದೆ ಪಾಲಕರು ಪ್ರತಿಭಟನೆ ನಡೆಸಿದರು. ಸಂಬಂಧಿಸಿದ ವೈದ್ಯನನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.  ಈ ಕುರಿತು ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಪ್ಪ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿ, ಪ್ರಕರಣದ ಬಗ್ಗೆ ಉತ್ತರಿಸುವಂತೆ ಸಂಬಂಧಿಸಿದ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಜಿಲ್ಲಾಧಿಕಾರಿಗೂ ವರದಿ ಕೊಟ್ಟಿದ್ದೇವೆ. ಎಂಎಲ್‌ಸಿ ಮಾಡಿದ್ದೇವೆ. ರೋಗಿಯ ಕಡೆಯವರಿಂದ ಲಿಖಿತ ದೂರು ಬಂದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net