ಹೆಬ್ಬೆ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು

19LDH3 falls
ಹೆಬ್ಬೆ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು.
Published on

ಲಿಂಗದಹಳ್ಳಿ: ನವೆಂಬರ್‌ನಿಂದ ಜೂನ್‌ವರೆಗೆ ಹೆಬ್ಬೆ ಜಲಪಾತ ವೀಕ್ಷಣೆಗೆ ಅನುಕೂಲಕರ ವಾತಾವರಣವಿರುವುದರಿಂದ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಹೆಬ್ಬೆ ಜಲಪಾತದ ಸೌಂದರ್ಯದ ಜತೆಗೆ ಇಲ್ಲಿಗೆ ಹೋಗುವ ದಾರಿಯುದ್ದಕ್ಕೂ ಸಿಗುವ ಪ್ರಕೃತಿ ಸೊಬಗು ಮತ್ತು ಕಾಡು ಪ್ರಾಣಿಗಳನ್ನು ನೋಡಲು ರಾಜ್ಯ, ದೇಶ, ವಿದೇಶಗಳಿಂದ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರಾಂತ್ಯ, ವರ್ಷಾಂತ್ಯ, ವರ್ಷಾರಂಭ ಹಾಗೂ ಶಾಲಾ ಕಾಲೇಜುಗಳ ರಜಾ ಸಂದರ್ಭದಲ್ಲಿ ಹೆಚ್ಚಿನ ಜನ ಸೇರುತ್ತಾರೆ.

ಜೂನ್‌ನಿಂದ ಅಕ್ಟೋಬರ್‌ವರೆಗೆ ಈ ಭಾಗದಲ್ಲಿ ಹೆಚ್ಚು ಮಳೆ ಬೀಳುವುದರಿಂದ ಜಲಪಾತ ವೀಕ್ಷಣೆಗೆ ತೊಡಕುಗಳಾಗುವುದರ ಜತೆಗೆ ಜಿಗಣೆಗಳ ಕಾಟದಿಂದಾಗಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತದೆ ಎಂದು ಭದ್ರಾ ವನ್ಯಜೀವಿ ತಣಿಗೆಬೈಲು ವಿಭಾಗದ ವಲಯ ಅರಣ್ಯಾಧಿಕಾರಿ ಸುಧಾಕರ ನಾಯಕ್ ತಿಳಿಸಿದರು.

ನೂರಾರು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಹೆಬ್ಬೆ ಜಲಪಾತದ ನೀರು ಕೆಳಭಾಗದಲ್ಲಿದ್ದ ಮಣ್ಣನ್ನೆಲ್ಲಾ ತನ್ನೊಂದಿಗೆ ಕೊಚ್ಚಿ ಕೊಂಡು ಹೋಗುವುದರಿಂದ ನೀರು ಬೀಳುವ ಸ್ಥಳದಲ್ಲಿ ದೊಡ್ಡ ಹೊಂಡವಾಗಿ ಮಾರ್ಪಟ್ಟು ಕಲ್ಲು ಬಂಡೆಗಳಷ್ಟೇ ಉಳಿದುಕೊಂಡಿವೆ. ಈ ಹೊಂಡ ಈಜುಕೊಳದಂತೆ ಪ್ರವಾಸಿಗರಿಗೆ ಗೋಚರಿಸುವುದರಿಂದ ಕೆಲವರು ಈ ಹೊಂಡದ ಗುಂಡಿಯೊಳಕ್ಕೆ ಇಳಿದು ಸ್ನಾನ ಮಾಡುವ ದುಸ್ಸಾಹಸಕ್ಕೆ ಮುಂದಾಗುವುದುಂಟು. ಈ ಸ್ಥಳ ಬಹಳ ಅಪಾಯಕಾರಿಯಾಗಿದ್ದು ಕಲ್ಲು ಬಂಡೆಗಳ ಮೇಲೆ ವರ್ಷಪೂರ್ತಿ ನೀರು ಹರಿದು ಪಾಚಿ ಕಟ್ಟಿರುವುದರಿಂದ ಕಾಲು ಜಾರಿ ನೀರಿಗೆ ಬಿದ್ದರೆ ಮೇಲಕ್ಕೆ ಬರುವುದು ಅಸಾಧ್ಯ. ಅನೇಕರು ಇಲ್ಲಿ ಈಜಲು ಹೋಗಿ ಮೃತಪಟ್ಟಿರುವ ಕಾರಣ ನೀರಿಗೆ ಇಳಿಯದಂತೆ ಪ್ರವಾಸಿಗರ ರಕ್ಷಣೆ ಮಾಡುವ ಸಲುವಾಗಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾವಲಿಗೆ ಇರಿಸಿದೆ ಎಂದು ಸುಧಾಕರ ನಾಯಕ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net