ಹೆದ್ದಾರಿ ಪಕ್ಕದ ಜಮೀನನ್ನು ರೈತರು ಮಾರದಿರಿ

04M.D.R.5
ಮದ್ದೂರು ಸಮೀಪದ ಕೆ.ಕೋಡಿಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಬಂಧ ಸಂಸದ ಪ್ರತಾಪ್‌ಸಿಂಹ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಪ್ರದೀಪ್, ಸುಧಾ, ಚಂದ್ರಶೇಖರ್, ಸತೀಸ್, ಅನಿಲ್ ಇದ್ದರು.
Published on

ಮದ್ದೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಪಕ್ಕದ ಜಮೀನುಗಳ ರೈತರು ರಿಯಲ್ ಎಸ್ಟೇಟ್ ಉದ್ಯಮಿಗಳ ಆಮೀಷಕ್ಕೆ ಬಲಿಯಾಗಿ ಜಮೀನುಗಳನ್ನು ಮಾರಾಟ ಮಾಡದಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.

ತಾಲೂಕಿನ ಕೆ.ಕೋಡಿಹಳ್ಳಿ ಸಮೀಪದ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮತ್ತು ಹೆದ್ದಾರಿಯಲ್ಲಿನ ಲೋಪ ದೋಷಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ದೈವಿಕ್ ಮತ್ತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನಂತರ ಗ್ರಾಮಸ್ಥರ ಮನವಿ ಆಲಿಸಿ ಮಾತನಾಡಿದರು.

ದಶಪಥ ಹೆದ್ದಾರಿ ನಿರ್ಮಾಣದಿಂದ ಅಕ್ಕ ಪಕ್ಕದ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದೆ. ಇಂತಹ ಜಮೀನುಗಳ ಮೇಲೆ ಈಗಾಗಲೇ ಕೆಲ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣು ಬಿದ್ದಿದೆ. ರಿಯಲ್ ಎಸ್ಟೇಟ್ ದಂಧೆಕೋರರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರೈತರು ತಮ್ಮ ಮೌಲ್ಯಯುತ ಜಮೀನುಗಳನ್ನು ಎಷ್ಟೇ ಕಷ್ಟವಾದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಹೆದ್ದಾರಿಯ ಎರಡು ಬದಿಯಲ್ಲಿ ಜಾಹೀರಾತು ಫಲಕಗಳ ನಿರ್ಮಾಣಕ್ಕೆ ರೈತರ ಜಮೀನುಗಳನ್ನು ಬಾಡಿಗೆ ರೂಪದಲ್ಲಿ ಪಡೆಯುವುದಕ್ಕೆ ಉದ್ಯಮಿಗಳು ಮಧ್ಯವರ್ತಿಗಳ ಮೂಲಕ ಕಡಿಮೆ ದರದಲ್ಲಿ ಬಾಡಿಗೆ ನಿಗದಿ ಮಾಡಿಕೊಂಡು ರೈತರಿಗೆ ವಂಚನೆ ಮಾಡುತ್ತಿದ್ದಾರೆ. ರೈತರು ನೇರವಾಗಿ ಉದ್ಯಮಿಗಳನ್ನು ಸಂಪರ್ಕಿಸಿ ಕನಿಷ್ಠ ತಿಂಗಳಿಗೆ ಒಂದು ಲಕ್ಷ ರೂ. ಬಾಡಿಗೆ ನಿಗದಿಪಡಿಸಿಕೊಂಡು ಅಗ್ರಿಮೆಂಟ್ ಮಾಡಿಕೊಂಡ ನಂತರ ಫಲಕ ನಿರ್ಮಾಣ ಮಾಡಲು ಅವಕಾಶ ನೀಡಬೇಕೆಂದು ಕಿವಿಮಾತು ಹೇಳಿದರು.

ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಹುತೇಕ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಇನ್ನೊಂದು ವಾರದಲ್ಲಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಕೆ.ಕೋಡಿಹಳ್ಳಿ ಸಮೀಪದ ಅಂಡರ್‌ಪಾಸ್ ಬಳಿಯಿಂದ ಕೊಲ್ಲಿ ವೃತ್ತದವರೆಗೆ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ವರ್ಷದ ಏಪ್ರಿಲ್, ಮೇನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿರುವುದರಿಂದ ಮದ್ದೂರು ಪಟ್ಟಣದಿಂದ ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಹುಣಸೇಮರದದೊಡ್ಡಿ, ರುದ್ರಾಕ್ಷಿಪುರ, ನಿಡಘಟ್ಟ ಹಾಗೂ ವಿವಿಧ ಗ್ರಾಮಗಳ ಜನರು ಬಳಸು ದಾರಿಯನ್ನು ಬಿಟ್ಟು ಸರ್ವಿಸ್ ರಸ್ತೆ ಮೂಲಕ ಕಡಿಮೆ ವೆಚ್ಚದಲ್ಲಿ ತಮ್ಮ ಗ್ರಾಮಗಳಿಗೆ ಪ್ರಯಾಣ ಮಾಡಬಹುದಾಗಿದೆ ಎಂದರು.

ಪ್ರದೀಪ್, ಸುಧಾ, ಚಂದ್ರಶೇಖರ್, ಸತೀಶ್, ಅನಿಲ್ ಕುಮಾರ್, ಶಿವರಾಜ್, ಕೇಬಲ್ ರಾಜು, ಗಿರೀಶ್, ಮಹೇಶ್, ಧನಂಜಯ, ನಾಗರಾಜ್, ಶಂಕರ್, ಪ್ರೀತಂ, ಸುರೇಂದ್ರ, ರಾಜು, ಯೋಗೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net