ಹೆಣ್ಣು ಕನಿಷ್ಠ ಎನ್ನುವುದು ಸರಿಯಲ್ಲ

31_07_Mdy_03(Samelana)
Published on

ಮಂಡ್ಯ: ಆರು ವರ್ಷದಿಂದ ಬಾಲಕಿಯಿಂದ 80 ವರ್ಷದ ಅಜ್ಜಿಯವರೆಗೂ ಮನೆಯನ್ನು ಕಾಯುವ ಏಕೈಕ ಜೀವಿ ಹೆಣ್ಣು. ಆದರೆ ಹೆಣ್ಣು ಕನಿಷ್ಠ ಎನ್ನುವುದನ್ನು ನಮ್ಮ ತಲೆಯಲ್ಲಿ ತುಂಬಿರುವುದು ಸರಿಯಲ್ಲ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಬೇಸರ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಏಳನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಶತಮಾನದಿಂದ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಹೆಣ್ಣು ಮಗು ಮನೆಯೊಳಗೆ ಹುಟ್ಟಬಾರದೆಂಬ ಪರಿಕಲ್ಪನೆಯನ್ನು ಹಿಂದಿನಿಂದಲೂ ಬೆಳೆಸಿಕೊಂಡು ಬಂದಿದ್ದಾರೆ. ಹೆಣ್ಣೆಂದರೆ ಕಂಟಕ, ಮಾಯೆ, ಮೈಲಿಗೆ, ಅಜ್ಞಾನಿ ಎಂಬುದನ್ನು ಹೇಳುವವರು ಅರ್ಥ ಮಾಡಿಕೊಳ್ಳಬೇಕು. ಮನೆಯೊಳಗೆ ಹೆಣ್ಣಿಲ್ಲ ಎಂದರೆ ಏನೂ ನಡೆಯುವುದಿಲ್ಲ. ಹಾಗಾಗಿ ಹೆಣ್ಣು ಅಬಲೆಯಲ್ಲ ಸಬಲೆ ಎಂದರು.

ಕೃಷಿ ಕ್ಷೇತ್ರದಲ್ಲಿಯೂ ಮಹಿಳೆಯರ ಕೆಲಸಗಳೇ ಹೆಚ್ಚಿರುತ್ತದೆ. ವ್ಯವಸಾಯದಲ್ಲಿ ಮಹಿಳೆಯೇ ಪ್ರಧಾನ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಷ್ಟಿದ್ದರೂ ಹೆಣ್ಣನ್ನು ಭಾರ ಎನ್ನುವುದನ್ನು ತಿಳಿಯುವ ಸಮಾಜದಲ್ಲಿ ಹೇಳಲಾಗುತ್ತದೆ. ಆದರೆ ಪುರುಷರೇ ಶ್ರೇಷ್ಟರೆಂಬುದನ್ನು ಬಿಡಬೇಕು. ಹೆಣ್ಣಾಗಲಿ ಅಥವಾ ಗಂಡಾಗಲಿ ಇಬ್ಬರೂ ಸಮಾನರೆ ಆಗಿದ್ದಾರೆ ಎಂಬುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ ಮಹಿಳೆಯರ ಪ್ರಕರಣಗಳನ್ನು ಮರು ತನಿಖೆ ನಡೆಸಬೇಕು. ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದ್ದು, ಅದು ನಿಷ್ಪಕ್ಷಪಾತವಾಗಿರಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಬಿಜೆಪಿ ಸರ್ಕಾರ ಇರುವ ಕಡೆ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಮೂರ್ನಾಲ್ಕು ವರ್ಷದಿಂದೀಚೆಗೆ 20 ಸಾವಿರ ಮಹಿಳೆಯರು ದೇಶದಲ್ಲಿ ಕಾಣೆಯಾಗಿದ್ದಾರೆ ಎಂದು ದೂರಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ರಾಜ್ಯ ಕಾರ್ಯದರ್ಶಿ ಸುನೀತಾ, ಜಿಲ್ಲಾ ಉಪಾಧ್ಯಕ್ಷೆ ಶೋಭಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಸಹ ಕಾರ್ಯದರ್ಶಿ ಮಂಜುಳಾ, ಸದಸ್ಯೆ ಕಲಾವತಿ ಇತರರಿದ್ದರು.

ಸಮ್ಮೇಳನದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ಗಾಂಧಿಭವನದವರೆಗೂ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net