ಹೆಜ್ಜೆನು ದಾಳಿ ಒರ್ವ ಸಾವು / ಐವರಿಗೆ ಗಂಭೀರ ಗಾಯ / ಆಸ್ಪತ್ರೆಗೆ ದಾಖಲು

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಪಿತೃಪಕ್ಷ ಪೂಜೆಯ ವೇಳೆ ಹೆಜ್ಜೇನು ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ತಾಲೂಕಿನ ಜಂಗಾಲಹಳ್ಳಿ ಗ್ರಾಮದ ಬಳಿ ಮಂಗಳವಾರ ಜರುಗಿದೆ.

ಜಂಗಾಲಹಳ್ಳಿ ಗ್ರಾಮದ ವೆಂಕಟಸ್ವಾಮಿ (೬೦) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅದೇ ಗ್ರಾಮದ ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್ ಹಾಗೂ ಮಾಲೂರು ತಾಲೂಕು ನಿದರಮಂಗಲ ಗ್ರಾಮದ ಶ್ರೀನಿವಾಸ್, ವೆಂಕಟಗಿರಿಯಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿತೃಪಕ್ಷದ ಹಿನ್ನೆಲೆಯಲ್ಲಿ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಲು ಜಂಗಾಲಹಳ್ಳಿ ಹೊರವಲಯದಲ್ಲಿ ಕುಟುಂಬಸ್ಥರು ೮ ರಿಂದ ೧೦ ಮಂದಿ ಸೇರಿದ್ದು, ಈ ವೇಳೆ ಸಾಂಬ್ರಾಣಿ ಹೊಗೆ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ಮರಗಳಲಿದ್ದ ಹೆಜ್ಜೇನು ಹುಳಗಳು ಆವರಿಸಿಕೊಂಡಿವೆ.

ಇದರಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಮಹಿಳೆಯರು ಸೀರೆಯಲ್ಲಿ ಮುಖವನ್ನು ಮುಚ್ಚಿಕೊಂಡು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಂಡಿದ್ದರೆ, ಪುರುಷರು ಸಿಕ್ಕಿಕೊಂಡಿದ್ದಾರೆ. ವೆಂಕಟಸ್ವಾಮಿಗೆ ಹೆಚ್ಚಿನ ಹುಳಗಳು ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡ ವೆಂಕಟಸ್ವಾಮಿ ಎಸ್.ಎನ್.ಆರ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಚಿತ್ರ ೦೧ ಕೆ.ಎಲ್.ಆರ್. ೦೭ : ಹೆಜ್ಜೇನು ದಾಳಿಯಿಂದ ಗಾಯಗೊಂಡಿರುವ ಶಾಮಣ್ಣ, ಸುಂದರಾಜ್, ಕಾರ್ತಿಕ್, ಶ್ರೀನಿವಾಸ್ ಮತ್ತು ವೆಂಕಟಗಿರಿಯಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net