ಹೆಚ್ಚು ಅನುದಾನ ತಂದದ್ದರಿಂದ ಕ್ಷೇತ್ರ ಸಮಗ್ರ ಅಭಿವೃದ್ಧಿ

29HAN-2 (2)
Published on

ಹನಗೋಡು: 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 9 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹನಗೋಡು ಗ್ರಾಮ ಪಂಚಾಯಿತಿ ಮೇಲಂತಸ್ತು ಸಭಾಂಗಣ ಕಟ್ಟಡವನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು.


ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 13ನೇ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಬಹಳ ಕಡಿಮೆ ಅನುದಾನ ಬರುತ್ತಿತ್ತು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮ ಪಂಚಾಯಿತಿಗಳ ಸರ್ವಾಂಗೀಣ ಅಭಿವೃದ್ಧಿಯಾಗಿದೆ. 14 ಮತ್ತು 15ನೇ ಹಣಕಾಸು ಯೋಜನೆಯಡಿ ಹೆಚ್ಚಿನ ಅನುದಾನ ನೀಡಿದ ಹಿನ್ನೆಲೆಯಲ್ಲಿ ಹುಣಸೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳು ಸುಸಜ್ಜಿತ ಕಟ್ಟಡವನ್ನು ಹೊಂದಿವೆ.


ರಾಜ್ಯದ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಗ್ರಾಮ ಒನ್ ಕೇಂದ್ರಗಳನ್ನಾಗಿ ಮಾರ್ಪಡಿಸಿ ಗ್ರಾಮೀಣಾ ಭಾಗದ ಜನರಿಗೆ ಒಂದೇ ಕಡೆ ಸೇವೆಗಳು ಸಿಗುವ ರೀತಿಯಲ್ಲಿ ಅನುಕೂಲ ಮಾಡಿಕೊಟ್ಟಿದೆ. ನಾನು ಸಂಸದನಾದ ನಂತರ ಮೈಸೂರು ಮತ್ತು ಮಡಿಕೇರಿ ಕ್ಷೇತ್ರಕ್ಕೆ ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡಿದ್ದೇನೆ ಎಂದರು.


ಜಿಲ್ಲಾಧಿಕಾರಿಗೆ ಮನವಿ ಕೊಡಿ: ಕುಶಾಲನಗರ-ಶ್ರೀರಂಗಪಟ್ಟಣ ಚತುಷ್ಪಥ ರಸ್ತೆಗೆ ಸುಮಾರು 4300 ಕೋಟಿ ರೂ.ಅನುದಾನ ತಂದು ನರೇಂದ್ರ ಮೋದಿ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದೇನೆ. ಕಟ್ಟೆಮಳಲವಾಡಿ, ನಾಗನಹಳ್ಳಿ, ಕಲ್ಲಹಳ್ಳಿ ಸೇರಿದಂತೆ ಇತರ ಹಳ್ಳಿಗಳಲ್ಲಿ ವ್ಯಾಪಾರ ವಹಿವಾಟುಗಳ ಮೇಲೆ ಬೆಲೆ ನಿಗದಿಯಾಗಲಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ಕಡಿಮೆಯಾದಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಳ್ಳಿ. ಈ ರಸ್ತೆ ಬಂದರೆ ಈ ಭಾಗದಲ್ಲಿ ಫ್ಯಾಕ್ಟರಿಗಳು ಸ್ಥಾಪನೆಗೊಂಡು ತಾಲೂಕು ಸವಾರ್ಂಗೀಣ ಅಭಿವೃದ್ಧಿಯಾಗುತ್ತದೆ ಎಂದರು.

ರೈಲ್ವೆ ಯೋಜನೆಯು ಹಳ್ಳ ಹಿಡಿಯುವ ಸಾಧ್ಯತೆ: ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಮಂಜೂರಾಗಿದ್ದು, ರಾಜ್ಯ ಸರ್ಕಾರ ಯೋಜನೆಗೆ ಅನುದಾನ ಕೊಡುವುದು ಅನುಮಾನವಾಗಿದೆ. ನೂತನ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಈ ವರ್ಷ ಯಾವುದೇ ರೀತಿ ಅನುದಾನ ಕೊಡುವುದಿಲ್ಲವೆಂದು ಹೇಳಿದ್ದಾರೆ. ಇದರಿಂದ ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಹಳ್ಳ ಹಿಡಿಯುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಅನಧಿಕೃತ ತಂಬಾಕು ಕಾರ್ಡ್‌ದಾರರಿಗೆ ಲೈಸನ್ಸ್: ಅನಧಿಕೃತ ತಂಬಾಕು ಬೆಳೆಗಾರರಿಗೆ ಈ ಹಿಂದೆ ಇದ್ದ ಎಲ್ಲ ರೀತಿಯ ದಂಡವನ್ನು ರದ್ದುಪಡಿಸಿ ಕಳೆದ ಬಾರಿ ತಂಬಾಕು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಅನಧಿಕೃತ ತಂಬಾಕು ಕಾರ್ಡ್‌ದಾರರಿಗೆ ಲೈಸನ್ಸ್ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಮತ್ತು ಮಡಿಕೇರಿ ಕ್ಷೇತ್ರಗಳಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಳೇ ಉಂಡುವಾಡಿಯಿಂದ ಚಾಮುಂಡೇಶ್ವರಿ ಕ್ಷೇತ್ರ ಮತ್ತು ಹುಣಸೂರು ಕ್ಷೇತ್ರಕ್ಕೆ ಶುದ್ಧ ಕುಡಿಯುವ ನೀರು ಕೊಡಲು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ನಮ್ಮ ತಂದೆ ಜಿ.ಟಿ ದೇವೇಗೌಡ ಹಾಗೂ ಪ್ರತಾಪ್‌ಸಿಂಹ ಅವರ ಕೊಡುಗೆ ಅಪಾರ. ಅಭಿವೃದ್ಧಿಯಲ್ಲಿ ನಾವು ಪ್ರತಾಪ್‌ಸಿಂಹ ಅವರ ಜತೆಗೂಡಿ ಕೆಲಸ ಮಾಡುವುದಾಗಿ ತಿಳಿಸಿದರು.


ಗ್ರಾಪಂ ಅಧ್ಯಕ್ಷೆ ರತ್ನಾಶ್ರೀಧರ್ ಮಾತನಾಡಿ, ಸಂಸದರು ಹಾಗೂ ಶಾಸಕರು ಹನಗೋಡಿನ ಮುಖ್ಯರಸ್ತೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಬೀದಿದೀಪ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿದ್ದಾರೆ ಎಂದರು.


ಉಪಾಧ್ಯಕ್ಷ ಬೋರೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ನಗರ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ತಾಪಂ ಇಒ ಮನು, ಮುಖಂಡರಾದ ಎಚ್.ಆರ್.ರಮೇಶ್, ದಾರಾ ಮಹೇಶ್, ಎಚ್‌ಬಿ.ಸುರೇಶ್, ಗಣಪತಿ, ಪುಟ್ಟಸ್ವಾಮಪ್ಪ, ಆಶ್ರಕ್, ಶ್ರೀಧರ್, ಜಿಪಂ ಎಇಇ ನರಸಿಂಹಯ್ಯ, ಪಿಡಿಒ ರಾಮಣ್ಣ, ಕಾರ್ಯದರ್ಶಿ ಬಸವರಾಜೇಗೌಡ, ಗುತ್ತಿಗೆದಾರ ಮುದಗನೂರು ಮಂಜು, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net