ಹೆಚ್ಚಳವಾಗುತ್ತಿವೆ ಬಾಲ್ಯ ವಿವಾಹ

13 KRN-2
????????????????????????????????????
Published on

ಕೆ.ಆರ್.ನಗರ: ಇತ್ತೀಚೆಗೆ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿದ್ದು, ವಿಷಯ ಗಂಭೀರತೆ ಪಡೆದುಕೊಂಡಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಮಾಲ್ತೇಶ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಾರ್ವಜನಿಕರ ಕುಂದು-ಕೊರತೆ ಮತ್ತು ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಥಳೀಯವಾಗಿ ಬಾಲ್ಯ ವಿವಾಹ ಮಾಡುವವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಒಂದೇ ಗ್ರಾಮದವರಾಗಿರುವುದರಿಂದ ಎಲ್ಲರೂ ಕೈಜೋಡಿಸಿ ಗೌಪ್ಯವಾಗಿಡುತ್ತಿದ್ದಾರೆ. ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ವಿಷಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯವಿದೆ. ಯಾವುದೇ ಇಲಾಖೆ ಅಧಿಕಾರಿಗಳು ಲೋಕಾಯುಕ್ತರು ಕರೆಯುವ ಸಭೆಗಳಿಗೆ ತಪ್ಪದೆ ಹಾಜರಾಗಿ ಕೇಳಿದ ಅಗತ್ಯ ದಾಖಲೆಗಳನ್ನು ನೀಡಬೇಕಲ್ಲದೆ, ನಿಮ್ಮ ಇಲಾಖೆಗಳಿಗೆ ಬಂದ ಆರ್‌ಟಿಐ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಕೊಡುವ ಜತೆಗೆ ದೂರುದಾರರಿಗೆ ಬೆದರಿಕೆ ಹಾಕುವುದು, ಆಮಿಷ ಒಡ್ಡುವಂತಹ ಕಾನೂನು ಬಾಹಿರ ಕೆಲಸಕ್ಕೆ ಮುಂದಾಗಬಾರದು ಎಂದು ಸೂಚಿಸಿದರು.

ಜನ ಸಾಮಾನ್ಯರಿಗೆ ಸರ್ಕಾರಿ ಇಲಾಖೆಗಳಲ್ಲಿ ಅತಿ ಹೆಚ್ಚು ತೊಂದರೆಯಾಗುತ್ತಿದೆ. ಸರ್ವೇ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದಲೇ ಹೆಚ್ಚು ತೊಂದರೆಯಾಗುತ್ತಿವೆ. ನರೇಗಾ ಯೋಜನೆಯಡಿ ಜೆಸಿಬಿ ಮೂಲಕ ಕೆಲಸ ಮಾಡಿಸಿ ಬಿಲ್ ಮಾಡಿಕೊಳ್ಳುತ್ತಿರುವುದಲ್ಲದೆ, ಸತ್ತವರ ಹೆಸರಿಗೆ ಜಾಬ್ ಕಾರ್ಡ್ ಮೂಲಕ ಹಣ ಹಾಕಿ ಅವ್ಯವಹಾರ ನಡೆಸಲಾಗುತ್ತಿದೆ ಎಂಬ ದೂರುಗಳೇ ನಮಗೆ ಹೆಚ್ಚಾಗಿ ಬರುತ್ತಿವೆ ಎಂದು ವಿಷಾದಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆ ಒತ್ತುವರಿ, ಸರ್ಕಾರಿ ಜಮೀನುಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ಸುಳ್ಳು ಮಾಹಿತಿಗಳನ್ನು ಮಾತ್ರ ನೀಡುತ್ತಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸೂಕ್ತ ಮಾಹಿತಿ ನೀಡಬೇಕು. ಯಾವುದೇ ಇಲಾಖೆಯ ಮೇಲಧಿಕಾರಿಗಳು ತಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ ಕಿರುಕುಳ, ತೊಂದರೆ ನೀಡಬಾರದು ಎಂದು ಸೂಚಿಸಿದರು.

ಪ್ರತಿ ಸರ್ಕಾರಿ ಇಲಾಖೆಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ, ನಾಡ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಕಡ್ಡಾಯವಾಗಿ ಲೋಕಾಯುಕ್ತ ನಾಮಫಲಕ ಅಳವಡಿಸಬೇಕು. ಅಲ್ಲದೇ ತಪ್ಪದೆ ಹಾಜರಾತಿ ಪುಸ್ತಕ, ಕ್ಯಾಸ್ ಡಿಕ್ಲರೇಷನ್ ಪುಸ್ತಕ ನಿರ್ವಹಿಸಿ ನಾವು ಬಂದಾಗ ಅದನ್ನು ತೋರಿಸಬೇಕು, ಇಲ್ಲವಾದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು.

ಸಾರ್ವಜನಿಕರೂ ತಮ್ಮ ಕೆಲಸ ಕಾರ್ಯಗಳಲ್ಲಿ ಅಲೆದಾಡಿಸುವ, ಲಂಚ ಕೇಳುವ ಅಧಿಕಾರಿಗಳು ಮತ್ತು ಇತರರ ಮೇಲೆ ನಮಗೆ ಇಮೇಲ್ ಮೂಲಕ, ಆನ್‌ಲೈನ್ ಮೂಲಕ, ಅಂಚೆ ಮೂಲಕ ಹಾಗೂ ಖುದ್ದು ದೂರು ನೀಡಬಹುದು ಎಂದು ತಿಳಿಸಿದರು.

ಪುರಸಭೆ, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿ, ಹಾಗೂ ಸೆಸ್ಕ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಮತ್ತು ರೈತರು ದೂರು ಸಲ್ಲಿಸಿದರು.

ಅದರಲ್ಲಿ ಕೆಲವು ದೂರುಗಳನ್ನು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹೇಳಿ ಪರಿಹರಿಸಲಾಯಿತು. ಉಳಿದ ದೂರುದಾರರ ಸಮಸ್ಯೆಯನ್ನು ಒಂದು ವಾರದಲ್ಲಿ ಪರಿಹರಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉಪ ತಹಸೀಲ್ದಾರ್ ಬಾಲಸುಬ್ರಮಣ್ಯ, ತಾಪಂ ಇಒ ಎಚ್.ಕೆ.ಸತೀಶ್, ಪುರಸಭಾ ಮುಖ್ಯಾಧಿಕಾರಿ ಸುಧಾರಾಣಿ, ಬಿಸಿಎಂ ಅಧಿಕಾರಿ ಚಂದ್ರಕಲಾ, ಟಿಎಚ್‌ಒ ಡಾ.ಕೆ.ಆರ್.ಮಹೇಂದ್ರಪ್ಪ, ಟಿಎಸ್‌ಡಬ್ಲುೃ ಎಸ್.ಎಂ.ಅಶೋಕ್‌ಕುಮಾರ್, ಸಿಡಿಪಿಒ ಪೂರ್ಣಿಮಾ, ಸೆಸ್ಕ್ ಎಇಇ ಅರ್ಕೇಶ್, ಪಿಎಸ್‌ಐ ಧನರಾಜ್, ಲೋಕಾಯುಕ್ತ ಪಿಎಸ್‌ಐಗಳಾದ ರವಿಕುಮಾರ್, ಜಯರತ್ನ, ಸಿಬ್ಬಂದಿ ವೀರಭದ್ರಸ್ವಾಮಿ, ಗುರುಪ್ರಸಾದ್, ಆಶಾ, ತ್ರಿವೇಣಿ, ಕಾಂತರಾಜ್, ದಿನೇಶ್, ಲೋಕೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net