ಹೆಚ್.ಎಂ.ಪಿ.ವಿ ವೈರಸ್ ಭಯ ಬೇಡ ಮುಂಜಾಗ್ರತೆ ಇರಲಿ / ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯದಲ್ಲಿ ಹೆಚ್.ಎಂ.ಪಿ.ವಿ.ವೈರಸ್ ಸೋಂಕು ವರದಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್.ಎಂ.ಪಿ.ವಿ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವAತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ, ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ವಯ ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಬೇಕು. ಕೈಗಳನ್ನು ಅಗಾಗ ಸಾಬೂನು ಅಥವಾ ಸ್ಯಾನಿಟೈಸರ್‌ನಿಂದ ತೊಳೆದು ಕೊಳ್ಳಬೇಕು. ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು. ಬಳಸಿದ ಟಿಶ್ಯೂ ಕರ ವಸ್ತ್ರವನ್ನು ಪುನಃ ಬಳಕೆ ಮಾಡಬಾರದು ಅನಾರೋಗ್ಯದ ಲಕ್ಷಣಗಳಿದ್ದವರು ಸಭೆ ಮತ್ತು ಸಮಾರಂಭದಲ್ಲಿ ಭಾಗವಹಿಸದಂತೆ ಸೂಚಿಸಲಾಗಿದೆ.

ಶಾಲಾ ಮಕ್ಕಳಲ್ಲಿ ಹಾಗೂ ಅಂಗನವಾಡಿ ಮಕ್ಕಳಲ್ಲಿ ಹೆಚ್.ಎಂ.ಪಿ.ವಿ ಸೋಂಕು ಹೆಚ್ಚಾಗಿ ಕಂಡು ಬರುವ ಸಾಧ್ಯತೆಯಿರುವುದರಿಂದ ಶೀತ, ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ವೈದ್ಯರ ಬಳಿ ಕರೆದೊಯ್ದು ಸಕಾಲದಲ್ಲಿ ಚಿಕಿತ್ಸೆ ಕೊಡಿಸಬೇಕು. ರೋಗ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಆರೈಕೆ ಮಾಡುವ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಹಾಗೂ ಶಾಲಾಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಶಾಲಾ ಆವರಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಪ್ರಮುಖ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡನ್ನು ಮೀಸಲಿಡಬೇಕು. ಅಗತ್ಯ ಪರೀಕ್ಷಾ ಪರಿಕರಗಳನ್ನು ಖರೀದಿಸಿ ದಾಸ್ತಾನು ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಶ್ರೀನಿವಾಸ್ ಸಭೆಗೆ ಮಾಹಿತಿ ನೀಡಿ ಆರೋಗ್ಯ ಇಲಾಖೆಯ ವರದಿಯನುಸಾರ ಹೆಚ್.ಎಂ.ಪಿ.ವಿ ರೋಗವು ಸಾಮಾನ್ಯವಾದ ಕೆಮ್ಮು ಶೀತ ಜ್ವರ, ಮೂಗು ಸೋರುವುದು, ತಲೆ ನೋವಿನಂತಹ ಲಕ್ಷಣಗಳನ್ನು ಹೊಂದಿರುತ್ತದೆ. ವಿಶೇಷವಾಗಿ ಕಿರಿಯ ಮತ್ತು ಹಿರಿಯ ವಯಸ್ಸಿನವರಲ್ಲಿ ಈ ರೋಗ ಲಕ್ಷಣಗಳು ಕಂಡು ಬರುತ್ತದೆ. ರಾಜ್ಯದ ಬೆಂಗಳೂರಿನ ಖಾಸಗಿ ಆರೋಗ್ಯ ಕೇಂದ್ರದಲ್ಲಿ ೨ ಹೆಚ್.ಎಂ.ಪಿ.ವಿ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಪ್ರಕರಣದಲ್ಲಿ ಈಗಾಗಲೇ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಉಳಿದೊಂದು ಪ್ರಕರಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಬಗ್ಗೆ ತಿಳಿದು ಬಂದಿದೆ ಎಂದರು.

ಹೆಚ್.ಎA.ಪಿ.ವಿ ವೈರಸ್‌ನಿಂದ ಕೆಮ್ಮು ಜ್ವರ ಉಸಿರಾಟದ ತೊಂದರೆ ಸೇರಿದಂತೆ ಜ್ವರ ತರಹದ ರೋಗಲಕ್ಷಣಗಳು ಉಂಟಾಗುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಬ್ರಾಂಕೈಟೀಸ್ ಅಥವಾ ನ್ಯೂಮೋನಿಯಾಕ್ಕೆ ಕಾರಣವಾಗಬಹುದು. ವಿಶೇಷವಾಗಿ ಚಿಕ್ಕಮಕ್ಕಳು, ವೃದ್ಧರು ಸೇರಿದಂತೆ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ಹೆಚ್.ಎಂ.ಪಿ.ವಿ ಸೋಂಕಿನ ಬಗ್ಗೆ ಸಾರ್ವಜನಿಕರು ಯಾವುದೇ ಭಯ ಮತ್ತು ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣ್ ಬಾಗೇವಾಡಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಜಗದೀಶ್, ಜಿಲ್ಲಾ ಮುಖ್ಯ ಶಸ್ತçಚಿಕಿತ್ಸಕಿ ಡಾ.ಮಮತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣ ಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೦೮ ಕೆ.ಎಲ್.ಆರ್. ೦೭ : ಜಿಲ್ಲಾಧಿಕಾರಿ ಎಂ.ಆರ್.ರವಿ ರವರ ಅಧ್ಯಕ್ಷತೆಯಲ್ಲಿ ಹೆಚ್.ಎಂ.ಪಿ.ವಿ.ವೈರಸ್ ಬಗ್ಗೆ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net