

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಮತ್ತು ವಿನೀಶ್ ಸೋಮವಾರ ಭೇಟಿಯಾಗಿದ್ದಾರೆ. ಪತ್ನಿ ಮತ್ತು ಪುತ್ರನನ್ನು ಕಂಡು ದರ್ಶನ್ ಕಣ್ಣೀರಿಟ್ಟಿದ್ದಾರೆ.
ಪತ್ನಿ ವಿಜಲಕ್ಷ್ಮೀ ಮತ್ತು ಪುತ್ರ ವಿನೀಶ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ತೆರಳಿ ದರ್ಶನ್‌ನನ್ನು ಭೇಟಿಯಾಗಿ ಕೆಲ ಕಾಲ ಮಾತನಾಡಿದರು. ಪತ್ನಿ ಮತ್ತು ಪುತ್ರನನ್ನು ನೋಡಿದ ದರ್ಶನ್ ಕಣ್ಣೀರಿಟ್ಟಿದ್ದಾರೆ. ಅದರಲ್ಲೂ ಪುತ್ರ ವಿನೀಶ್‌ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಧೈರ್ಯ ತುಂಬಿದರು. ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಕೆಲ ಕಾಲ ಚರ್ಚಿಸಿದರು. ಪತ್ನಿ ಮತ್ತು ಮಗನ ಜತೆಗೆ ಮಾತನಾಡವಾಗ ದರ್ಶನ್ ತುಂಬಾ ಭಾವುಕಾರಾಗಿದ್ದರು ಎಂದು ತಿಳಿದು ಬಂದಿದೆ.
ಇದಕ್ಕೂ ಮುನ್ನ ವಿಜಯಲಕ್ಷ್ಮೀ ಮತ್ತು ವಿನೀಶ್ ಕಾರೊಂದರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಬಂದು ಮಾಧ್ಯಮದವರನ್ನು ಕಂಡು ಬಳಿಕ ವಾಪಾಸ್ ತೆರಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ಬೇರೊಂದು ಕಾರಿನಲ್ಲಿ ಕಾರಾಗೃಹದತ್ತ ಬಂದ ತಾಯಿ-ಮಗನನ್ನು ಪೊಲೀಸರು ದರ್ಶನ್ ಭೇಟಿಗೆ ಕರೆದೊಯ್ದರು. ಸುಮಾರು ಅರ್ಧ ಗಂಟೆಯ ಭೇಟಿ ಬಳಿಕ ವಿಜಯಲಕ್ಷ್ಮೀ ಮತ್ತು ವಿನೀಶ್ ಕಾರಾಗೃಹದಿಂದ ನಿರ್ಗಮಿಸಿದರು.
ನಟ ವಿನೋದ್ ಪ್ರಭಾಕರ್ ಭೇಟಿ:
ನಟ ದರ್ಶನ್ ಅವರನ್ನು ನಟ ವಿನೋದ್ ಪ್ರಭಾಕರ್ ಕಾರಾಗೃಹದಲ್ಲಿ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು. ದರ್ಶನ್ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದರ್ಶನ್ ಸಾರ್ ಅವರನ್ನು ಭೇಟಿಯಾಗದೆ ನಾಲ್ಕು ತಿಂಗಳು ಕಳೆದಿತ್ತು. ಅವರ ಹುಟ್ಟುಹಬ್ಬದ ದಿನ ಭೇಟಿಯಾಗಿದ್ದೆ. ಬಳಿಕ ರೇಣುಕಾಸ್ವಾಮಿ ಕೊಲೆ ಸುದ್ದಿ ನೋಡಿ ದರ್ಶನ್ ಸರ್ ಬಗ್ಗೆ ತಿಳಿದುಕೊಂಡೆ ಎಂದು ಹೇಳಿದರು.
ದರ್ಶನ್ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಇದ್ದಾಗ ಭೇಟಿ ಮಾಡಲು ಪ್ರಯತ್ನಿಸಿದ್ದೆ. ಆದರೆ ಭೇಟಿ ಸಾಧ್ಯವಾಗಲಿಲ್ಲ. ಇದೀಗ ಅವರನ್ನು ಭೇಟಿಯಾದೆ. ಅಲ್ಲಿ ಹೆಚ್ಚೇನು ಮಾತನಾಡಲು ಸಾಧ್ಯವಾಗಲಿಲ್ಲ. ಕೈ ಕುಲುಕಿದ ದರ್ಶನ್ ಸರ್, ನನ್ನನ್ನು ಟೈಗರ್ ಎಂದರು. ನಾನು ಬಾಸ್ ಎಂದು ಕರೆದೆ ಅಷ್ಟೇ. ಬೇರೇನೂ ಮಾತನಾಡಲಿಲ್ಲ
ನಾಲ್ವರು ತುಮಕೂರು ಜೈಲಿಗೆ:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ೨೪ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ರೇಣುಕಾಸ್ವಾಮಿ ಕೊಲೆ ಪ್ರಕರಣದ ೮ನೇ ಆರೋಪಿ ರವಿಶಂಕರ್, ೧೫ನೇ ಆರೋಪಿ ಕಾರ್ತಿಕ್, ೧೬ನೇ ಆರೋಪಿ ಕೇಶವಮೂರ್ತಿ ಹಾಗೂ ೧೭ನೇ ಆರೋಪಿ ನಿಖಿಲ್ ನಾಯಕ್‌ನನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಆದೇಶಿಸಿದ್ದಾರೆ.
ಇದಕ್ಕೂ ಮುನ್ನ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ಸ್ಥಳಾಂತರಿಸಲು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸರ್ಕಾರದ ವಿಶೇಷ ಅಭಿಯೋಜಕರು ಏಕೆ ಈ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಬೇಕು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.