

ಸರಗೂರು: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನಕೊಳ ಗ್ರಾಮದ ದೇವಮ್ಮ ಎಂಬುವರ ಮನೆ ಸಂಪೂರ್ಣ ಕುಸಿದಿದ್ದು, ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹೂವಿನಕೊಳ ಗ್ರಾಮದ ದೇವಮ್ಮ ಎಂಬುವರ ಮನೆಯ ಗೋಡೆ ಹಾಗೂ ಛಾವಣಿ ಕುಸಿದಿತ್ತು. ಅದೃಷ್ಟವಶಾತ್ ಮನೆಯಲಿದ್ದ ದೇವಮ್ಮ, ಮಗ ಪ್ರಕಾಶ್, ಸೊಸೆ ಭಾಗ್ಯ ಮತ್ತು ಮಕ್ಕಳು ಅಪಾಯದಿಂದ ಪಾರಾಗಿದ್ದರು. ಆದರೆ ಇರುವ ಮನೆಯನ್ನು ಕಳೆದುಕೊಂಡಿದ್ದ ದೇವಮ್ಮ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಗ್ರಾಮದ ಮುಖಂಡ ಸಹಾಯದಿಂದ ಅಧಿಕಾರಿಗಳ ಬಳಿ ಅರ್ಜಿ ಸಲ್ಲಿಸಲು ಮುಂದಾಗಿದ್ದರು.
ಮನೆ ಹಾನಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ತಾಲೂಕು ಕಚೇರಿಗೆ ತೆರಳಿದರೆ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಎಂದು ಕರ್ನಾಟಕ ಭೀಮ ಸೇನೆ ತಾಲೂಕು ಘಟಕದ ಅಧ್ಯಕ್ಷ ಹೂವಿನಕೊಳ ಮಹೇಂದ್ರ ಆರೋಪಿಸಿದ್ದಾರೆ.
ಸಧ್ಯ ಮಳೆ ನಿಂತಿದ್ದು, ಪರಿಹಾರದ ಅರ್ಜಿ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿ ಅಧಿಕಾರಿಗಳು ಅರ್ಜಿಗಳನ್ನು ನಿರಾಕರಿಸುತ್ತಿದ್ದಾರೆ. ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಸಾಕಷ್ಟು ಮನೆಗಳು ಕುಸಿಯುತ್ತಿವೆ. ಕುಸಿದ ಮನೆ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.