ಹುಳುಗಳಿಗೆ ಆಹಾರವಾದ ಕಡಲೆ!

111
Published on

ಬೈಲಹೊಂಗಲ: ಕಳೆದ ಬಾರಿ ಕರ್ನಾಟಕ ಕೃಷಿ ಮಾರಾಟ ಮಹಾಮಂಡಳದ ವತಿಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಿ ಪಟ್ಟಣದ ಎಪಿಎಂಸಿ ಆವರಣದ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಕೋಟ್ಯಂತರ ಮೊತ್ತದ ಕಡಲೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹುಳುಗಳ ಪಾಲಾಗುತ್ತಿದೆ.

19 ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ 4,835 ರೂ.ನಂತೆ ಬೆಂಬಲ ಬೆಲೆಯಲ್ಲಿ ಖರೀದಿಸಿದ್ದ ಲಕ್ಷ ಟನ್‌ಗೂ ಅಧಿಕ ಕಡಲೆಕಾಳುಗಳು ಹುಳುಗಳು ತಿಂದು ಹಾಳಾಗಿವೆ. ಇದನ್ನು ಕಂಡೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.

ಈ ವಿಚಾರವಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ರಾಜ್ಯಾದ್ಯಂತ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿರುವ ಲಕ್ಷಾಂತರ ಟನ್ ಕಡಲೆ ಹಾಳಾಗಿದೆ. ಇಷ್ಟು ದೊಡ್ಡ ಪ್ರಮಾಣದ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಸಣ್ಣ ಹಾದಿಮನಿ, ರಾಮು ರಜಪೂತ, ಆನಂದ ಕಾಜಗಾರ ಇತರರಿದ್ದರು.

2019-20ನೇ ಸಾಲಿನಲ್ಲಿ ಬೆಂಬಲ ಬೆಲೆಯಲ್ಲಿ ಈ ಕಡಲೆ ಖರೀದಿಸಿದ್ದು, ಸ್ಟಾಕ್ ಇಲ್ಲಿಯೇ ಇದ್ದು ಬಹಳ ದಿನವಾಯಿತು. ಇವುಗಳ ರಕ್ಷಣೆ ಹೊಣೆ 3ರಿಂದ 6 ತಿಂಗಳವರೆಗೆ ಮಾತ್ರ ನಮ್ಮದಾಗಿರುತ್ತದೆ. ಇದೀಗ ವಾತಾವರಣದಿಂದ ಹಾಗೂ ಹುಳುಗಳು ತಿಂದು ಕಡಲೆ ಹಾಳಾಗುತ್ತಿದೆ. ಅನೇಕ ಬಾರಿ ಕೇಂದ್ರ ಸರ್ಕಾರ ಅಧೀನದ ನಾಫೇಡ್ ಕಂಪನಿಗೆ ಈ ಕುರಿತು ನೋಟಿಸ್ ನೀಡಲಾಗಿದ್ದರೂ ಅವರು ಕೇಂದ್ರ ಸರ್ಕಾರದಿಂದ ನಮಗೆ ಆದೇಶ ಬಂದಿಲ್ಲ ಎಂದು ತಿಳಿಸುತ್ತಿದ್ದಾರೆ. ಇದೀಗ ನಮಗೆ ರೈತರಿಂದ ಸೋಯಾಬೀನ್ ಖರೀದಿಸಲು ಸಹ ಜಾಗದ ಕೊರತೆ ಉಂಟಾಗುತ್ತಿದೆ.| ಆಕಾಶ ಮುಶಣ್ಣವರ, ಉಗ್ರಾಣ ವ್ಯವಸ್ಥಾಪಕ, ಬೈಲಹೊಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net