ಹುಲಿಕಲ್ ಘಾಟ್‌ನಲ್ಲಿ ಕೆಟ್ಟು ನಿಂತ ಲಾರಿ

17hos2p hulikal
ಹುಲಿಕಲ್ ಘಾಟ್ ಹೇರ್‌ಪಿನ್ ತಿರುವಿನಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು.
Published on

ಹೊಸನಗರ: ಸೋಮವಾರ ಮಧ್ಯರಾತ್ರಿಯಿಂದ 10 ಗಂಟೆಗಳ ಕಾಲ ಹುಲಿಕಲ್ ಘಾಟ್ ಮಾರ್ಗ ಬಂದ್ ಆಗಿ ಸಂಚಾರ ಸಿಕ್ಕು ಉಂಟಾಗಿತ್ತು. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಂಚಾರಮುಕ್ತ ಕಾರ್ಯ ವಿಳಂವಾಗಿ ನಗರ ಠಾಣೆ ಪೊಲೀಸರು ಹೈರಾಣಾದರು.

ಸೋಮವಾರ ತಡರಾತ್ರಿ 2 ಗಂಟೆಗೆ ಹತ್ತು ಚಕ್ರದ ಲಾರಿಯೊಂದು ಚಂಡಿಕಾಂಬ ದೇವಸ್ಥಾನದ ಸಮೀಪ ಹೇರ್ ಪಿನ್ ತಿರುವಿನಲ್ಲಿ ಟರ್ನ್ ಮಾಡುವಾಗ ಕೆಟ್ಟು ನಿಂತಿದೆ. ಅದು ಯಾವ ಪರಿ ಎಂದರೆ ಒಂದು ಬೈಕ್ ಕೂಡ ಸಾಗಲು ಸಾಧ್ಯವಾಗದ ರೀತಿಯಲ್ಲಿ ತಿರುವಿನ ಮಧ್ಯದಲ್ಲೇ ನಿಂತು ಸಮಸ್ಯೆಯಾಗಿತ್ತು.

ನಗರ ಠಾಣೆ ಪೊಲೀಸರಿಗೆ ಮಾಹಿತಿ ಸಿಕ್ಕು ಸ್ಥಳಕ್ಕೆ ಬರುವಷ್ಟರಲ್ಲಿ ಘಾಟ್ ರಸ್ತೆಯ ಎರಡು ಭಾಗದಲ್ಲೂ ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲದೆ ಈ ನಡುವೆ ಬಸ್‌ಗಳು ಕೂಡ ಸಿಲುಕಿ ಪ್ರಯಾಣಿಕರು ಪರದಾಡುವಂತಾಯಿತು. ಸಂಚಾರಮುಕ್ತಗೊಳಿಸಲು ನೆಟ್‌ವರ್ಕ್ ಸಮಸ್ಯೆಯಿಂದ ಇನ್ನಷ್ಟು ವಿಳಂಬವಾಯಿತು.

ಕೊನೆಗೆ ಹುಲಿಕಲ್ ಘಾಟ್ ಸಂಚಾರಮುಕ್ತ ಆಗುವಾಗ ಮಂಗಳವಾರ ಬೆಳಗ್ಗೆ 11 ಗಂಟೆಯಾಗಿತ್ತು. ಬಳಿಕ ಶಾಸಕ ಆರಗ ಜ್ಞಾನೇಂದ್ರ, ತಾಪಂ ಇಒ ನರೇಂದ್ರಕುಮಾರ್, ಪಿಎಸ್‌ಐ ಶಿವಾನಂದ ಕೋಳಿ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net