ಹುಲಿ ದಾಳಿಗೆ ಹಸು ಬಲಿ

ಹನಗೋಡು ಸಮೀಪದ ಗೌಡಿಕೆರೆಯಲ್ಲಿ ಹುಲಿ ದಾಳಿಗೆ ಬಲಿಯಾಗಿರುವ ಹಸು.
IMG-20221109-WA0181
Published on

ಹನಗೋಡು: ನಾಗರಹೊಳೆ ಉದ್ಯಾನವನದಂಚಿನ ಬೀರತಮ್ಮನಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯ ಜಮೀನಿನಲ್ಲಿ ಮಂಗಳವಾರ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.


ಹನಗೋಡು ಹೋಬಳಿಯ ಗೌಡಿಕೆರೆ ಗ್ರಾಮದ ಶೇಖರ್ ಎಂಬುವರಿಗೆ ಸೇರಿದ ಹಸುವನ್ನು ಕಾಡಂಚಿನ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಅನತಿ ದೂರಕ್ಕೆ ಎಳೆದೊಯ್ದು ಬಿಟ್ಟು ಹೋಗಿದೆ.


ಕಳೆದ ವಾರವಷ್ಟೇ ಕೊಳುವಿಗೆಯಲ್ಲಿ ಹಸುವೊಂದನ್ನು ಹುಲಿ ದಾಳಿ ಮಾಡಿ ಗಾಯಗೊಳಿಸಿತ್ತು. ಚಿಕಿತ್ಸೆ ಕೊಡಿಸಿದರೂ ಫಲಾಕಾರಿಯಾಗದೆ ಹಸು ಮೃತಪಟ್ಟಿತ್ತು. ಇತ್ತೀಚಿನ ದಿನಗಳಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಆತಂಕಗೊಂಡಿದ್ದು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಭೀತರಾಗಿದ್ದಾರೆ.


ಘಟನಾ ಸ್ಥಳಕ್ಕೆ ಹುಣಸೂರು ವಲಯದ ಡಿಆರ್‌ಎಫ್‌ಒ ಸಿದ್ದರಾಜು ಭೇಟಿ ನೀಡಿ ಮಹಜರು ನಡೆಸಿ ಇಲಾಖೆಯಿಂದ ಕೂಡಲೇ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.


ಹೆಜ್ಜೆ ಗುರುತು ಪತ್ತೆ: ಬಿಲ್ಲೇನಹೊಸಹಳ್ಳಿ, ನೇರಳಕುಪ್ಪೆ, ಕಚುವಿನಹಳ್ಳಿ, ಶೆಟ್ಟಹಳ್ಳಿ, ಕೊಳವಿಗೆ, ನೇಗತ್ತೂರು ಸುತ್ತಮುತ್ತಲಿನ ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ತಕ್ಷಣ ಹುಲಿ ಹಿಡಿಯಲು ಕ್ರಮ ವಹಿಸಬೇಕು ಎಂದು ಹನಗೋಡು ಗ್ರಾಪಂ ಸದಸ್ಯ ಎಚ್.ಪಿ.ಶಿವಣ್ಣ ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net