ಹುಲಿ ದಾಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆಗೆ ಸೂಚನೆ

13NGD1
Published on

ನಂಜನಗೂಡು: ತಾಲೂಕಿನ ಕಾಡಂಚಿನ ಭಾಗದಲ್ಲಿ ಹುಲಿ ದಾಳಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಬೇಕು ಹಾಗೂ ಸೆರೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.


ಹುಲಿ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ತಾಲೂಕಿನ ಬಳ್ಳೂರುಹುಂಡಿ ಗ್ರಾಮದ ಸ್ವಾಮಿ ದಾಸಯ್ಯ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಸ್ವಾಮಿ ವೈದ್ಯಕೀಯ ಸಂಪೂರ್ಣ ವೆಚ್ಚವನ್ನು ಅರಣ್ಯ ಇಲಾಖೆಯಿಂದಲೇ ಭರಿಸುವಂತೆ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಇತ್ತೀಚೆಗೆ ಒಡೆಯನಪುರ ಗ್ರಾಮದ ಪುಟ್ಟಸ್ವಾಮಿಗೌಡ ಎಂಬುವರು ಹುಲಿ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಸ್ವಾಮಿ ದಾಸಯ್ಯ ಮೇಲೆ ಹುಲಿ ದಾಳಿ ನಡೆಸಿದೆ. ಇದರಿಂದಾಗಿ ಕಾಡಂಚಿನ ಭಾಗದ ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು. ಕಾಡಿನ ಗಡಿ ಪ್ರದೇಶವನ್ನು ವನ್ಯಜೀವಿಗಳು ದಾಟಿ ಬರದಂತೆ ಎಸ್‌ಟಿಎಫ್ ಪಡೆಯ ಕಣ್ಗಾವಲು ಹೆಚ್ಚಿಸಬೇಕು. ಸಿಸಿ ಕ್ಯಾಮರಾ ಅಳವಡಿಸಿ ಅವುಗಳ ಚಲನವಲನ ಮೇಲೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ಹೇಳಿದರು.

ಎಸ್‌ಟಿಎಫ್ ಕಣ್ಗಾವಲು
ಗಾಯಾಳು ಸ್ವಾಮಿ ದಾಸಯ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಹುಲಿ ದಾಳಿ ಕಾಡಂಚಿನ ಪ್ರದೇಶದಲ್ಲೇ ಆಗಿರುವುದರಿಂದ ಬೋನು ಇರಿಸುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇನ್ನು ಸುತ್ತಲಿನ ಗ್ರಾಮಗಳ ಜನರ ಆತಂಕವನ್ನು ನಿವಾರಿಸುವ ದೃಷ್ಟಿಯಿಂದ ಎಸ್‌ಟಿಎಫ್ ಪಡೆಯನ್ನು ಕಾಡಂಚಿನ ಭಾಗದಲ್ಲಿ ನಿಯೋಜಿಸಿ ವನ್ಯಜೀವಿಗಳ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂದು ಬಂಡೀಪುರ ಎಸಿಎಫ್ ಪರಮೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net