ಹುಬ್ಬಳ್ಳಿಯಲ್ಲಿ ಬಾಲಕಿ ಹಂತಕನ ಎನ್‌ಕೌಂಟರ್ ಪ್ರಕರಣ: ಸರ್ಕಾರದಿಂದ ಹೈಕೋರ್ಟ್‌ಗೆ ವರದಿ

highcourt
Published on

ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾದ ಬಿಹಾರದ ರಿತೇಶ್‌ಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಥಿತಿಗತಿ ವರದಿ ಸಲ್ಲಿಸಿದೆ.

ಬೆಂಗಳೂರಿನ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ಡಾ.ಮಧುಭೂಷಣ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಈ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಪ್ರಕರಣ ವಿಚಾರವಾಗಿ ಸ್ಥಿತಿಗತಿ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳಂತೆ ಎಲ್ಲ ಅಂಶಗಳನ್ನು ಪಾಲಿಸಲಾಗಿದೆ ಎಂದು ಪೀಠದ ಮುಂದೆ ನುಡಿದರು.

ಆಗ ಪೀಠವು ಅರ್ಜಿದಾರರ ಪರ ವಕೀಲೆಯನ್ನು ಕುರಿತು, ಸ್ಥಿತಿಗತಿ ವರದಿ ಸಲ್ಲಿಸುವ ಮೂಲಕ ನಿಮ್ಮ, ನಮ್ಮ ಹಾಗೂ ಸರ್ಕಾರದ ಪಾತ್ರವೂ ಮುಗಿದಿದೆ. ಇಷ್ಟಾಗಿಯೂ ಅರ್ಜಿ ಬಾಕಿ ಉಳಿಸಬೇಕೆಂದರೆ ಉಳಿಸಲಾಗುವುದು ಎಂದರು.

ಈ ವೇಳೆ ಅರ್ಜಿದಾರರ ಪರ ವಕೀರು, ರಿತೇಶ್‌ಕುಮಾರ್ ಎನ್‌ಕೌಂಟರ್ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಮೇಲೆ ಪೀಠ ನಿಗಾ ಇಡಬೇಕು. ಜತೆಗೆ ಪಿಯುಸಿಎಲ್ ವರ್ಸಸ್ ಮಹಾರಾಷ್ಟ್ರ ಪ್ರಕರಣದಲ್ಲಿನ ಮಾರ್ಗಸೂಚಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಇದಲ್ಲದೆ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಭಾಗಿಯಾಗಿರುವುದರಿಂದ ಅಂತಿಮ ವಾದ ಮಂಡಿಸಲು ಸಮಯಾವಕಾಶ ನೀಡಬೇಕೆಂದು ಕೋರಿದರು. ಈ ಅಂಶ ಪರಿಗಣಿಸಿದ ಪೀಠ ಏ.28ಕ್ಕೆ ವಿಚಾರಣೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net