ಹುಣಸೂರಿನಲ್ಲಿ ಜೆಡಿಎಸ್ ಪರ ಅಲೆ

Published on

ಹುಣಸೂರು : ತಾಲೂಕಿನಲ್ಲಿ ಜೆಡಿಎಸ್ ಪರ ಅಲೆ ಎದ್ದಿದ್ದು, ಜನ ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯೆಂದು ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಬಂದ ನೂರಾರು ಯುವಕರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.


ಹುಣಸೂರಿನಿಂದ ದೂರಾಗಿದ್ದೇವೆ ಎಂದು ಟೀಕಿಸುವವರಿಗೆ ತಾಲೂಕಿನ ಜನತೆ ನಮ್ಮ ಕುಟುಂಬಕ್ಕೆ ನೀಡುತ್ತಿರುವ ಸ್ವಾಗತವೇ ಉತ್ತರವಾಗಿದೆ. ಹುಣಸೂರು ಎಂದಿಗೂ ನಮ್ಮ ಕುಟುಂಬದ ಕರ್ಮಭೂಮಿ. ಚುನಾವಣಾ ವೆಚ್ಚಕ್ಕೂ ಹಣ ನೀಡುವ ಮೂಲಕ ಬೆಂಬಲ ನೀಡುತ್ತಿದ್ದಾರೆ. ತಾಲೂಕಿನಾದ್ಯಂತ ಪ್ರತಿಹಳ್ಳಿಯಲ್ಲೂ ಜೆಡಿಎಸ್ ಪರ ಅಲೆ ಎದ್ದಿದ್ದು, ಇದನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ದನಿಯಿಲ್ಲದವರ, ಶೋಷಿತರ ಮತ್ತು ಸರ್ವರ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಪಕ್ಷದ ಹಿರಿಯ ಮುಖಂಡ ಸಿ.ಟಿ.ರಾಜಣ್ಣ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸತ್ಯ. ಅಧಿಕಾರಕ್ಕೆ ಬಂದ ನಂತರ ರೈತರ ಮತ್ತು ಮಹಿಳೆಯರ ಸಾಲಮನ್ನಾ ಮಾಡಲು ಈಗಾಗಲೇ ಪಂಚರತ್ನ ಯಾತ್ರೆ ಮೂಲಕ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ತಿಳಿಸುತ್ತ ಬಂದಿದ್ದಾರೆ ಎಂದರು.


ಪಕ್ಷದ ತಾಲೂಕು ಅಧ್ಯಕ್ಷ ದೇವರಾಜ್ ಒಡೆಯರ್ ಮಾತನಾಡಿದರು. ಯುವ ಉದ್ಯಮಿ ಎಳನೀರು ಚೇತನ್, ಗ್ರಾಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ ಸೇರಿದಂತೆ ರಾಮೇನಹಳ್ಳಿ, ಚೆನ್ನಸೋಗೆ, ಅಂಗಟಹಳ್ಳಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಮುಖಂಡ ಗೋವಿಂದೇಗೌಡ, ತಿಮ್ಮೇಗೌಡ, ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಎ.ಪಿ.ಸ್ವಾಮಿ, ತಾಪಂ ಮಾಜಿ ಸದಸ್ಯ ಟಿ .ಆರ್.ಶ್ರೀನಿವಾಸ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸಗೌಡ, ಗಣೇಶ್, ಜಲೇಂದ್ರ, ರಾಜೇಗೌಡ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net