ಹುಡುಕಾಟದ ಹಸಿವು ಇದ್ದವರಲ್ಲಿ ಆಧ್ಯಾತ್ಮಿಕ ಉನ್ನತಿಯನ್ನು ಪಡೆಯುವ ಸಾಮರ್ಥ್ಯ ಇರುತ್ತದೆ

16
Published on

ಹುಡುಕಾಟದ ಹಸಿವು ಇದ್ದವರಲ್ಲಿ ಆಧ್ಯಾತ್ಮಿಕ ಉನ್ನತಿಯನ್ನು ಪಡೆಯುವ ಸಾಮರ್ಥ್ಯ ಇರುತ್ತದೆ ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಹೇಳಿದರು.

ಬಗರದ ನಾದಬ್ರಹ್ಮ ಸಭಾಂಗಣದಲ್ಲಿ ನಗರದ ಪರಂಪರೆ ಸಂಸ್ಥೆಯಿಂದ ಸೋಮವಾರ ಆಯೋಜಿಸಿದ್ದ ಆಧ್ಯಾತ್ಮಿಕ ಉಪನ್ಯಾಸದಲ್ಲಿ ‘ವೈರಾಗ್ಯನಿಧಿ ಅಕ್ಕ’ ವಿಷಯ ಕುರಿತು ಮಾತನಾಡಿದ ಅವರು, ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಲು ಅಗತ್ಯವಾದ ಹುಡುಕಾಟದ ಹಸಿವು ಇರಬೇಕು. ಆಗ ಮಾತ್ರ ಬಯಸಿದ್ದು ದೊರೆಯುತ್ತದೆ ಎಂದರು.

ಅಕ್ಕ ಮಹಾದೇವಿ ನಮಗಿಂಥ ಹೇಗೆ ಭಿನ್ನ ಎಂದರೆ, ಅಕ್ಕ ನಮಗೆ ಕಾಣುವುದಕ್ಕಿಂತ ಭಿನ್ನವಾಗಿ ವಿಷಯವನ್ನು ಕಾಣುತ್ತಿದ್ದಳು. ಅವಳ ಹಸಿವು ತೀವ್ರವಾಗಿತ್ತು. ತಿಲದೊಳಗಿನ ತೈಲ, ಮರದೊಳಗಿನ ತೇಜದಂತೆ ಚನ್ನ ಮಲ್ಲಿಕಾರ್ಜುನನ ಕಂಡಿದ್ದಳು. ವೈರಾಗ್ಯ ಮಾರ್ಗವನ್ನು ಬಹು ಹಿಂದೆಯೇ ಹೊಕ್ಕಿದ್ದಳು ಎಂದರು.

ಅಕ್ಕ ಮಹಾದೇವಿಯು ಕೌಶಿಕನ ಹೆಂಡತಿಯಾಗಿದ್ದಳು, ಷರತ್ತುಗಳನ್ನು ಮುರಿದನೆಂದು ವೈರಾಗ್ಯ ಹಾದಿ ಹಿಡಿದಳು ಎಂದು ತಿಳಿಯುವುದಕ್ಕಿಂತಲೂ ಅವಳ ವಚನಗಳಿಂದಲೇ ಅವಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಯಾವುದೇ ಮಹಾ ವ್ಯಕ್ತಿಗಳ ಬಗ್ಗೆ ಅರಿಯುವಾಗ ಈ ಮಾರ್ಗವನ್ನು ಅನುಸರಿಸಬೇಕು. ಆಗ ಮಾತ್ರ, ಅವರ ನೈಜ ಸ್ವರೂಪವನ್ನು, ಸಾಗಿದ ದಾರಿಯನ್ನು ನಾವು ಕಂಡುಕೊಳ್ಳಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net