

ನಂಜನಗೂಡು: ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಜನರನ್ನು ಭಾಷೆಯ ನೆಲೆಯಲ್ಲಿ ಒಗ್ಗೂಡಿಸುವಲ್ಲಿ ಹಾಗೂ ಪ್ರತ್ಯೇಕ ಭಾಷಾವಾರು ರಾಜ್ಯಸ್ಥಾಪನೆ ಮಾಡುವಲ್ಲಿ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನಗಳನ್ನು ಕನ್ನಡಿಗರು ಸದಾ ಸ್ಮರಿಸಬೇಕು ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ತಿಳಿಸಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲೆಂಟ್ ಫಾರ್ಮೋವಾ ಕಾರ್ಖಾನೆಯಲ್ಲಿ ಸೋಮವಾರ ಕಾರ್ಮಿಕ ಒಕ್ಕೂಟದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣ ಚಳ ವಳಿಯಿಂದಾಗಿ ಕನ್ನಡನಾಡು ಉದಯವಾಯಿತು ಸ್ವಾತಂತ್ರ್ಯ ಪಡೆದ ನಂತರ ಅಧಿಕಾರಕ್ಕೆ ಬಂದವರು ಭಾಷಾವಾರು ಪ್ರಾಂತ್ಯಗಳ ರಚನೆ ಮಾಡುವ ಒಲವಿರಲಿಲ್ಲ, ದೇಶಾದ್ಯಂತ ಹಿಂದಿಯನ್ನು ಏಕ ಭಾಷೆಯಾಗಿ ಒಪ್ಪಿಸಬೇಕು ಎಂಬ ಉದ್ದೇಶ ಹೊಂದಿದ್ದರು. ಆದರೆ ಭಾಷೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ, ಚರಿತ್ರೆ ಉಳಿಯಲು ಸಾಧ್ಯ ಎಂಬುದನ್ನು ಅರಿತಿದ್ದ ಕೆಚ್ಚೆದೆಯ ಕನ್ನಡಿಗರು ಹೋರಾಟ ನಡೆಸಿದ್ದರಿಂದ ನಮ್ಮ ರಾಜ್ಯ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.
ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ಮಾತನಾಡಿ, ಕಳೆದ 13 ವರ್ಷಗಳಿಂದ ಕಾರ್ಖಾನೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಲ್ಲದೆ ಕನ್ನಡದಲ್ಲಿ ಅಪರೂಪದ ಸಾಧನೆ ತೋರುವ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ. ಕಾರ್ಖಾನೆಯಲ್ಲಿ ಕನ್ನಡ ಕಟ್ಟುವ ಕೆಲಸಕ್ಕೆ ಸದಾ ಪ್ರೋತ್ಸಾಹ ನೀಡಲಾಗುತ್ತಿದ್ದು ಈ ಹಿಂದೆ ರಾಜ್ಯ ಸರ್ಕಾರದಿಂದ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಕಿಶೋರ್ ಹಾಗೂ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜುಬಿಲೆಂಟ್ ಕಾರ್ಖಾನೆಯ ಸುಂದರ್ ಗಣೇಶ್, ಕನ್ನಡ ಸಂಘದ ಆಧ್ಯಕ್ಷ ರಮೇಶ್, ಪ್ರದೀಪ್ ಕುಮಾರ್, ನಮಿತ ಇತರರು ಭಾಗವಹಿಸಿದ್ದರು.