

ಸಾಗರ: ಕಾಗೋಡು ಚಳವಳಿ ಮೂಲಕ ನಮಗೆಲ್ಲ ಭೂಮಿಹಕ್ಕು ಕೊಡಿಸುವ ಕೆಲಸವನ್ನು ಕಾಗೋಡು ತಿಮ್ಮಪ್ಪ ಮಾಡಿದ್ದಾರೆ. ಹಾಗೆಯೇ ಬಂಗಾರಪ್ಪ ಅವರು ಬದುಕನ್ನು ವ್ಯವಸ್ಥಿತವಾಗಿ ಕಟ್ಟಿಕೊಳ್ಳಲು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇವರ ಪರಿಶ್ರಮದ ಫಲವಾಗಿ ನಾವು ಗೌರವಯುತವಾಗಿ ಬದುಕಲು ಕಾರಣವಾಗಿದೆ ಎಂದು ಜಿಲ್ಲಾ ಸಚಿವ ಮಧು ಬಂಗಾರಪ್ಪ ಹೇಳಿದರು. ಸಾಗರದ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ಪ್ರಾಂತ್ಯ ಆರ್ಯ ಈಡಿಗ ಸಂಘದ ಬೆಳ್ಳಿಹಬ್ಬ ಅಂಗವಾಗಿ ಜೋಗ ರಸ್ತೆಯಲ್ಲಿ ನಿರ್ಮಿಸುತ್ತಿರುವ ನೂತನ ಸಮುದಾಯ ಭವನ, ವಾಣಿಜ್ಯ ಮಳಿಗೆಗಳ ಶಂಕುಸ್ಥಾಪನೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿಗಂದೂರು ದೇವಸ್ಥಾನ ಹಿಂದುಳಿದ ವರ್ಗಕ್ಕೆ ಸೇರಿದೆ. ಇದನ್ನು ನಮ್ಮ ಸಮುದಾಯದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ನಾನು ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ ಎಂದರು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಬದ್ಧವಿದೆ. ಸಮುದಾಯವನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಸಬೇಕು. ಈಡಿಗ ಸಮುದಾಯ ಮುಖ್ಯ ವಾಹಿನಿಗೆ ಬರಲು ಶ್ರಮಿಸಿದ ನಮ್ಮ ನಾಯಕರನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಈ ಹಿಂದೆ ಅಧಿಕಾರಿಗಳೂ ಸೇರಿ ಸಮುದಾಯದ ಕೆಲವರು ತಾವು ಈಡಿಗರು ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಈಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಸಮಾಜದ ಅಭಿವೃದ್ಧಿಗೆ ಸಿಗಂದೂರು ರಾಮಪ್ಪ ಮಾತ್ರವಲ್ಲದೆ, ಆರ್ಥಿಕ ಸ್ಥಿತಿವಂತರೂ ಸಹಕಾರ ನೀಡಬೇಕು.
ಗೋಪಾಲಕೃಷ್ಣ ಬೇಳೂರು, ಶಾಸಕ
ನೂತನ ಸಮುದಾಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸಮಾಜದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಕಾಲಕಾಲಕ್ಕೆ ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಂಘ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕವಾಗಿ ಪ್ರಗತಿ ಕಾಣುವ ಹೊತ್ತಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ, ಮಾಜಿ ಶಾಸಕರಾದ ಡಾ. ಜಿ.ಡಿ.ನಾರಾಯಣಪ್ಪ, ಬಿ.ಸ್ವಾಮಿ ರಾವ್, ಪ್ರಮುಖರಾದ ಬಿ.ಆರ್.ಜಯಂತ್, ಎಸ್.ಕೆ.ಚಂದ್ರು, ರವಿ ಹೊಳೆಕೊಪ್ಪ, ತಾರಾಮೂರ್ತಿ, ಟಿ.ವಿ.ಪಾಂಡುರಂಗ, ಪರಮೇಶ್ವರ್, ಎಚ್.ಎನ್.ದಿವಾಕರ್, ತುಕಾರಾಮ, ನಾಗವೇಣಿ ಪ್ರವೀಣ್, ಕರುಣಾಕರ, ಕಲಸೆ ಚಂದ್ರಪ್ಪ, ಸಾರದಾ ನಾಗರಾಜ್ ಇತರರಿದ್ದರು.