ಹಿಜಾಬ್ ಗಲಾಟೆ ಹಿಂದೆ ಮತಾಂಧ ಶಕ್ತಿಗಳ ಕೈವಾಡ; ಗೃಹ ಸಚಿವ ಆರಗ ಜ್ಞಾನೇಂದ್ರ

20220219_152629
Published on

ಕಲಬುರಗಿ: ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಗಲಾಟೆ ಇಲ್ಲ. ಕೆಲವು ಬೆರಳೆಣಿಕೆಯಷ್ಟು ಕಾಲೇಜು, ಶಾಲೆಗಳಲ್ಲಿ ಮತಾಂಧ ಶಕ್ತಿಗಳ ಕೈವಾಡದಿಂದ ಗಲಾಟೆ ಸೃಷ್ಟಿಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜುಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತಾಳ್ಮೆಯಿಂದ ವೀಕ್ಷಣೆ ಮಾಡಲಾಗುತ್ತಿದೆ. ಗಲಾಟೆ ಸೃಷ್ಟಿಸುತ್ತಿರುವವರಿಗೆ ಎಚ್ಚರಿಕೆ ನೀಡಿ, ತನಿಖೆ ನಡೆಸಿ ಮೊಕ್ಕದಮೆ ಹೂಡಲಾಗುತ್ತಿದೆ ಎಂದು ಹೇಳಿದರು. 

ಹಿಜಾಬ್ ಸಮಸ್ಯೆ ಕುರಿತು ತನಿಖೆಗೆ ಅಲ್ಪಸಂಖ್ಯಾತ ಶಾಸಕರು ಮನವಿ ಸಲ್ಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಎಲ್ಲರೂ ಕೂಡಿಕೊಂಡು ಈ ಸ್ಥಿತಿಯಿಂದ ಹೊರತರಬೇಕು. ಮಕ್ಕಳಲ್ಲಿ ಸಂಸ್ಕಾರ ತುಂಬುವ ಕೆಲಸ ಮಾಡಬೇಕು. ಕೋರ್ಟ್ ಕಾಯ್ದೆ, ಸಂವಿಧಾನದ ಪ್ರಕಾರವೇ ಹೋಗಬೇಕು. ಪಿಎಫ್ಐ, ಎಸ್ ಡಿಪಿಐನಂಥಾ ಸಂಸ್ಥೆಗಳನ್ನು ನಿರ್ಜೀವಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು. 

ಈಶ್ವರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕಾಂಗ್ರೆಸ್ ವಾದದಲ್ಲಿ ಹುರುಳು ಇಲ್ಲ. ಡಿ.ಕೆ.ಶಿವಕುಮಾರ್ ರಾಷ್ಟ್ರ ಧ್ವಜ ಇಳಿಸಿ, ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಹೇಳಿದಂತೆಯೇ ಈಶ್ವರಪ್ಪ ಹೇಳಿಕೆಯ ಬಗ್ಗೆ ಸುಳ್ಳು ಹರಡಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net