ಹಿಂದುಗಳ ಮೇಲಿನ ದಬ್ಬಾಳಿಕೆಗೆ ತಕ್ಕ ಉತ್ತರ

05bhr 2 protest
ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿದರು. ಆರ್.ಡಿ.ಮಹೇಂದ್ರ, ಟಿ.ಎಂ.ಉಮೇಶ್, ಅತಿಶಯ್, ಪ್ರಭಾಕರ್ ಪ್ರಣಸ್ವಿ, ಜಗದೀಶ್ಚಂದ್ರ, ಕೆ.ಆರ್.ದೀಪಕ್ ಇದ್ದರು.
Published on

ಬಾಳೆಹೊನ್ನೂರು: ಹಿಂದುಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ, ಹತ್ಯೆಗಳು ನಡೆಯುತ್ತಿದ್ದು ಇದಕ್ಕೆ ಉತ್ತರ ನೀಡುವ ಸಮಯ ದೂರವಿಲ್ಲ ಎಂದು ವಿಶ್ವ ಹಿಂದು ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದರು.

ಹಿಂದುಗಳ ಮೇಲಿನ ದೌರ್ಜನ್ಯ ಹಾಗೂ ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ವಿಹಿಂಪ ಹಾಗೂ ಬಜರಂಗದಳ ಸೋಮವಾರ ಕರೆ ನೀಡಿದ್ದ ಚಿಕ್ಕಮಗಳೂರು ಬಂದ್ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾಶ್ಮೀರ, ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಹಿಂದು ಎನ್ನುವ ಕಾರಣಕ್ಕೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿರುವುದು ವಿಷಾದನೀಯ ಎಂದರು.

ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಹಿಂದು ಸಂಘಟನೆ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದ್ದರೂ ಇಂತಹ ಘಟನೆ ನಡೆದಿರುವುದು ದುರ್ದೈವ. ಈ ಹಿಂದೆ ಗೋದ್ರಾದಲ್ಲಿ ನಡೆದ ಘಟನೆಗೆ ಹಿಂದು ಸಮಾಜ ಕೊಟ್ಟ ಉತ್ತರ ಎಲ್ಲರಿಗೂ ತಿಳಿದಿದೆ. ಮಂಗಳೂರು ಭಾಗದಲ್ಲಿ ನಡೆದ ಘಟನೆಗೆ ಹಿಂದುಗಳು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ. ಅಬ್ದುಲ್ ರಜಾಕ್ ಎಂಬುವವರು ಸುಹಾಸ್ ಶೆಟ್ಟಿ ಕೊಲೆ ಸಮರ್ಥಿಸಿಕೊಂಡಿರುವುದು ಖಂಡನೀಯ. ರಜಾಕ್ ಮೇಲೆ ರೌಡಿಶೀಟರ್ ಪಟ್ಟಿ ಇದ್ದರೆ, ಸುಹಾಸ್ ಮೇಲೆ ಹಿಂದು ಸಮಾಜಕ್ಕಾಗಿ ಹೋರಾಡಿದ್ದಕ್ಕೆ ಇರುವ ಕೇಸ್‌ಗಳಾಗಿವೆ ಎಂದು ತಿಳಿಸಿದರು.

ವಿಹಿಂಪ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಪೋಸ್ಟ್‌ಗಳನ್ನು ಹಾಕಿದ್ದು ಇದನ್ನು ಸರ್ಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ತನಿಖೆಯಾಗಿ ಪೋಸ್ಟ್ ಹಾಕಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಗೃಹ ಸಚಿವರು ಸುಹಾಸ್ ಶೆಟ್ಟಿಯನ್ನು ರೌಡಿ ಎಂದು ಘೋಷಿಸಿರುವುದು ವಿಪರ್ಯಾಸ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಮಾತನಾಡಿ, ಹಿಂದುಗಳು ದೇಶದಲ್ಲಿರುವ ಎಲ್ಲ ಜಾತಿ, ಜನಾಂಗಗಳೂ ಒಂದೇ ಎಂಬ ಮನೋಭಾವ ಹೊಂದಿದ್ದಾರೆ. ಕೆಲ ಸರ್ಕಾರ, ರಾಜಕಾರಣಿಗಳು ಕೆಲವರ ಓಲೈಕೆಗೆ ಮುಂದಾಗಿವೆ. ಕಾಶ್ಮೀರ ಘಟನೆಗೆ ಪ್ರಧಾನಿ ತಕ್ಕ ಉತ್ತರ ನೀಡಲಿದ್ದಾರೆ. ಭಾರತಕ್ಕೆ ಯುದ್ಧ ಮಾಡುವುದು ದೊಡ್ಡದಲ್ಲ. ಆದರೆ ತಂತ್ರಗಾರಿಕೆ ಮೂಲಕ ವಿರೋಧಿ ದೇಶಕ್ಕೆ ತಕ್ಕ ಉತ್ತರ ನೀಡಲು ಕಾದಿದ್ದಾರೆ ಎಂದರು.

ಮುಖಂಡರಾದ ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಸಂದೀಪ್ ಶೆಟ್ಟಿ, ಕೆ.ಆರ್.ದೀಪಕ್, ಅಣ್ಣಪ್ಪ ಹೇರೂರು, ರಕ್ಷಿತ್, ಮಹೇಶ್ಚಂದ್ರ, ಕೆ.ಟಿ.ಗೋವಿಂದೇಗೌಡ, ಮಂಜು ಶೆಟ್ಟಿ, ಪ್ರದೀಪ್ ಕಿಚ್ಚಬ್ಬಿ, ಜಗದೀಶ್ ಅರಳೀಕೊಪ್ಪ, ಉಮೇಶ್, ಮಂಜು ಹೊಳೆಬಾಗಿಲು, ಆಟೋ ಸಂದೇಶ್, ವಿಲಾಸ್ ಕುಡ್ವ, ಅರುಣ್‌ಕುಮಾರ್, ಮಂಜು ಹಲಸೂರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net