ಹಿಂದು ಮಹಾಗಣಪತಿ ಉತ್ಸವಕ್ಕೆ ಧ್ವಜಸ್ತಂಭ ಪೂಜೆ

Hindu Maha Ganapathi
Published on

ಚಿತ್ರದುರ್ಗ: ದೇಶದ ಗಮನ ಸೆಳೆದಿರುವ ಕೋಟೆನಗರಿಯ ಹಿಂದು ಮಹಾಗಣಪತಿ ಮಹೋತ್ಸವದ ಅಂಗವಾಗಿ ಪಂಚಾಚಾರ್ಯ ಕಲ್ಯಾಣ ಪಂಟಪ ಸಮೀಪದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣಕ್ಕಾಗಿ ಧ್ವಜಸ್ತಂಭ, ಗೋಮಾತೆ, ಭೂಮಿ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು.

ಉತ್ಸವದ ಸ್ಥಳದಲ್ಲಿ ತಾಯಿ ಭಾರತಾಂಬೆ, ಆಂಜನೇಯ ಸ್ವಾಮಿಯ ಭಾವಚಿತ್ರವಿಟ್ಟು ಪೂಜಿಸಲಾಯಿತು. ಇದಕ್ಕೆ ವಿವಿಧ ಮಠಾಧೀಶರು, ಉತ್ಸವ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಭಕ್ತರು ಸಾಕ್ಷಿಯಾದರು.

18ನೇ ವರ್ಷದ ಉತ್ಸವವಾಗಿದ್ದು, ಆ. 27ರಂದು ಹಿಂದು ಮಹಾಗಣಪತಿ ಮೂರ್ತಿಯನ್ನು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ, ಅಂದಿನಿಂದ ಸೆ. 13ರವರೆಗೆ ಪೂಜಾ ಕೈಂಕರ್ಯಗಳು ನಡೆಯಲಿವೆ. ಒಟ್ಟು 18 ದಿನವೂ ವೈವಿಧ್ಯಮಯವಾಗಿ ಆಚರಿಸಲು ಸಮಿತಿ ಈಗಿನಿಂದಲೇ ಸಿದ್ಧತೆಗೆ ಮುಂದಾಗಿದೆ.

ಉತ್ಸವ ವರ್ಷದಿಂದ ವರ್ಷಕ್ಕೆ ಮೆರುಗು ಪಡೆಯುತ್ತಿದ್ದು, ದೇಶದ ಗಮನ ಸೆಳೆಯುತ್ತಿದೆ. ಹೆಚ್ಚಿನ ಭಕ್ತಸಮೂಹ ಆಕರ್ಷಿಸುವಲ್ಲಿ ಸಫಲವಾಗಿದೆ. ಲಕ್ಷಾಂತರ ಜನಸಾಗರದ ನಡುವೆ ಶೋಭಾಯಾತ್ರೆ ಸಾಗಲಿದೆ. ಇದು ಚಿತ್ರದುರ್ಗದ ಧಾರ್ಮಿಕ ಹಬ್ಬವಾಗಿ ಹೊರಹೊಮ್ಮಿದೆ ಎಂದು ಮಠಾಧೀಶರು ಬಣ್ಣಿಸಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ ಸೇರಿ ಇನ್ನಿತರೆ ಮಠಾಧೀಶರು ನೇತೃತ್ವ ವಹಿಸಿದ್ದರು.

ಉತ್ಸವ ಸಮಿತಿ ಅಧ್ಯಕ್ಷ ಶರಣ್‌ಕುಮಾರ್, ಎಂಎಲ್ಸಿ ಕೆ.ಎಸ್. ನವೀನ್, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಕೂಡಾ ಮಾಜಿ ಅಧ್ಯಕ್ಷ ಬದರಿನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮುಖಂಡರಾದ ಜಿ.ಎಂ. ಸುರೇಶ್, ಸಿದ್ಧಾರ್ಥ್ ಗುಂಡಾರ್ಪಿ, ವೆಂಕಟೇಶ್‌ಯಾದವ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ದಕ್ಷಿಣ ಪ್ರಾಂತ ಉಪಾಧ್ಯಕ್ಷ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net