

ನಂಜನಗೂಡು: ಹಿಂದು ಧರ್ಮವನ್ನು ತ್ಯಜಿಸಿ ಅನ್ಯಧರ್ಮ ಸ್ವೀಕರಿಸಿರುವವರನ್ನು ಮನವೊಲಿಸಿ ಮರಳಿ ಹಿಂದು ಧರ್ಮಕ್ಕೆ ಕರೆತರುವ ಜವಬ್ದಾರಿಯನ್ನು ಮಠ ಮಾನ್ಯಗಳು ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮತಾಂತರ ಪಿಡುಗು ಕೊನೆಗೊಳ್ಳಬೇಕು. ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದರೆ ಸಾಲದು, ಅದನ್ನು ಪರಿಣಾಮಕಾರಿಯಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ದೀನರು, ದುರ್ಬಲರನ್ನು ಆಸೆ, ಆಮಿಷಗಳಿಗೆ ಒಳಪಡಿಸಿ ಮತಾಂತರ ಮಾಡಲು ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. ಅವುಗಳಿಂದ ದೂರವಿರಲು ಜನರನ್ನು ಜಾಗೃತಗೊಳಿಸಬೇಕಾಗಿದೆ. ಹಿಂದು ಧರ್ಮ ತ್ಯಜಿಸಿರುವವರನ್ನು ಮರಳಿ ಕರೆತರುವ ಕೆಲಸ ಆಗಬೇಕಿದೆ. ಮಠ ಮಾನ್ಯಗಳು ಹಾಗೂ ಸ್ವಾಮೀಜಿಗಳ ಮೇಲೆ ಎಲ್ಲರಿಗೂ ಪೂಜ್ಯನಿಯ ಭಾವವಿದೆ. ಹಾಗಾಗಿ ಅಂತರವನ್ನು ಮನವೊಲಿಸಿ ಕರೆತರುವ ಕೆಲಸ ಆಗಲಿ ಎಂದು ಆಶಿಸಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಗಳು ಮಾಡಲು ಆಗದಂತಹ ಸಾಮಾಜಿಕ ಕಾರ್ಯಗಳನ್ನು ಮಠ ಮಾನ್ಯಗಳು ಸುಲಭವಾಗಿ ಒದಗಿಸುತ್ತಿವೆ. ಶಿಕ್ಷಣ, ಸಂಸ್ಕಾರ, ಧಾರ್ಮಿಕವಾಗಿ ಮಠಗಳ ಕೊಡುಗೆ ಅನನ್ಯ. ಈ ಕಾರಣಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಮಠಗಳಿಗೆ ಅನುದಾನ ನೀಡುವ ಪರಂಪರೆಗೆ ಮುನ್ನುಡಿ ಬರೆದೆ. ನಂತರ ಬಂದ ಸರ್ಕಾರಗಳು ಅದನ್ನು ಮುಂದುವರಿಸಿಕೊಂಡು ಹೋಗುತ್ತಿವೆ ಎಂದರು.
ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆ ಉಳ್ಳವನು ನಾನು. ಸಕಾಲದಲ್ಲಿ ಮಳೆಯಾಗಿ ಕೆರೆ ಕಟ್ಟೆ, ನದಿ ತುಂಬಿ ಹರಿದರೆ ಹಾಗೂ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕರೆ ರೈತರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ. ಅಧಿಕಾರದಲ್ಲಿದ್ದಾಗ ಮೈಸೂರು ಭಾಗಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ. ಮೈಸೂರು, ಚಾಮರಾಜನಗರ ಭಾಗದಲ್ಲಿ ಕೆರೆ ಕಟ್ಟೆ ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸಿದ ತೃಪ್ತಿ ಇದೆ ಎಂದು ಹೇಳಿದರು.
ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಮೂಲಕ ಜಲಮೂಲ ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕಾಗಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಸೇರಿದಂತೆ ರೈತರು ಬೆಳೆಯುವ ಫಸಲಿಗೂ ಮಾರಕವಾಗಲಿದೆ. ಜಲಮೂಲ ಮಾಲಿನ್ಯ ಆಗಲಿದೆ. ಇದರಿಂದ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದರು.
ಆಧುನಿಕ ಕಾಲಘಟ್ಟದಲ್ಲಿ ಸಮಾಜವನ್ನು ಹೇಗೆ ಸರಿದಾರಿಯಲ್ಲಿ ಕರೆದುಕೊಂಡು ಹೋಗುವ ವಿಚಾರದಲ್ಲಿ ಸುತ್ತೂರು ಮಠ ಬದ್ಧತೆಯನ್ನು ತೋರುತ್ತಿರುವುದಕ್ಕೆ ಈ ಜಾತ್ರಾ ಮಹೋತ್ಸವವೇ ನಿದರ್ಶನವಾಗಿದೆ. ಮೈಸೂರಿನ ರಾಜಮನೆತನಕ್ಕೂ, ಸುತ್ತೂರು ಮಠಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಈ ಬಾಂಧವ್ಯ ಮುಂದೆಯೂ ಇರಲಿದೆ ಎಂದು ಹೇಳಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸದುರ್ಗ ಭಗೀರಥ ಉಪ್ಪಾರಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಗ್ರಾಮ ವಿದ್ಯೋದಯ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ಯುಎಸ್‌ಎ ಕೋರ್ಟ್ ಆಡಳಿತಾಧಿಕಾರಿ ವೀಣಾ ತೋಟಕುರ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಕರ್ನಾಟಕ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.
ವಿಶ್ವಗುರುವಾಗುವತ್ತ ಭಾರತ
ಕಳೆದ 8 ವರ್ಷದಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಭಾರತವನ್ನು ವಿಶ್ವಗುರು ಪಥದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಪಾಕಿಸ್ತಾನ, ಚೀನಾ ದೇಶಗಳು ಆರ್ಥಿಖವಾಗಿ ಅವನತಿಯತ್ತ ಸಾಗುತ್ತಿದ್ದರೆ ಬಾರತ ಬಲಿಷ್ಠವಾಗಿ ಜಾಗತಿಕ ಮಟ್ಟದಲ್ಲಿ ಮಹಾನ್ ನಾಲ್ಕನೇ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.